ಪ್ಯೊಂಗ್ಯಾಂಗ್ :ಶಸ್ತ್ರಾಸ್ತ್ರ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಹಿಂದೆ ಬೀಳುವುದೇ ಇಲ್ಲ ಎಂದು ಉತ್ತರ ಕೆೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಪುನರುಚ್ಚರಿಸಿದ್ದಾರೆ. ಯಾರೂ ವಿರೋಧಿಸಲು ಸಾಧ್ಯವಾಗದ ಅಪಾರ ಸೇನಾ ಸಾಮರ್ಥ್ಯ ಇದ್ದಾಗ ಮಾತ್ರ ಯುದ್ಧವನ್ನು ತಡೆಯಲು ಸಾಧ್ಯ ಎಂದಿದ್ದಾರೆ.
ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆ-ಕೆಸಿಎನ್‌ಎಗೆ ಮಾಹಿತಿ ನೀಡಿರುವ ಕಿಮ್, ಅಪಾರ ಸೇನಾ ಸಾಮರ್ಥ್ಯ ಇದ್ದಾಗ ಮಾತ್ರ ಸಾಮ್ರಾಜ್ಯ ಶಾಹಿಗಳ ಬೆದರಿಕೆಗಳನ್ನು ತಡೆಯಲು ಸಾಧ್ಯ ಎಂದು ಹೇಳಿದ್ದಾರೆ. ಕಿಮ್ ಅವರ ಈ ಹೇಳಿಕೆ ಅಮೆರಿಕಕ್ಕೆ ಪರೋಕ್ಷವಾಗಿ ಎಚ್ಚರಿಕೆ ಎನ್ನಲಾಗಿದೆ. ಉತ್ತರ ಕೊರಿಯಾ ಇತ್ತೀಚೆಗೆ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿತ್ತು. ಇದರಿಂದಾಗಿ ಉತ್ತರ ಕೊರಿಯಾ ಶೀಘ್ರದಲ್ಲೇ ಪರಮಾಣು ಪರೀಕ್ಷೆಯನ್ನು ಪ್ರಾರಂಭಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ವಾರ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯೊಂದಿಗೆ ಉತ್ತರ ಕೊರಿಯಾ ಈ ವರ್ಷ ಇದುವರೆಗೆ ಒಟ್ಟು 12 ಪರೀಕ್ಷೆಗಳನ್ನು ನಡೆಸಿದೆ. ದೂರದ ಗುರಿಯನ್ನು ಮುಟ್ಟಬಲ್ಲ ಹ್ವಾಸಂಗ್-17 ಕ್ಷಿಪಣಿಯನ್ನು ಕಳೆದ ಶುಕ್ರವಾರ ಉಡಾವಣೆ ಮಾಡಲಾಗಿತ್ತು. ಇದು 6,248 ಕಿ.ಮೀ. ಎತ್ತರವನ್ನು ತಲುಪಿ 90 ಕಿ.ಮೀ ದೂರದಲ್ಲಿ ಗುರಿ ಮುಟ್ಟಿದೆ.