ಸಿಯೋಲ್(ಉತ್ತರ ಕೊರಿಯಾ):ಪರಮಾಣು ದಾಳಿ ಸಾಮರ್ಥ್ಯವಿರುವ ನೀರೊಳಗಿನ ಡ್ರೋನ್ ಪರೀಕ್ಷಿಸಿರುವುದಾಗಿ ಉತ್ತರ ಕೊರಿಯಾ ಶುಕ್ರವಾರ ಹೇಳಿಕೊಂಡಿದೆ. ಅಮೆರಿಕ ಮತ್ತು ಜಪಾನ್ ಜಂಟಿಯಾಗಿ ಕೈಗೊಂಡ ನೌಕಾ ಸಮರಾಭ್ಯಾಸಕ್ಕೆ ಪ್ರತಿಯಾಗಿ ಈ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾದೊಂದಿಗಿನ ಮಾತುಕತೆ ರದ್ದುಗೊಳಿಸುವುದಾಗಿ ಘೋಷಿಸಿದ್ದರು. ದ.ಕೊರಿಯಾವನ್ನು ವಿದೇಶಿ ಶತ್ರು ಎಂದು ವ್ಯಾಖ್ಯಾನಿಸಲು ತಮ್ಮ ದೇಶ ಸಂವಿಧಾನವನ್ನು ತಿದ್ದುಪಡಿ ಮಾಡಲಿದೆ ಎಂದು ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಡ್ರೋನ್ ಪರೀಕ್ಷೆ ನಡೆಯುತ್ತಿರುವುದು ಗಮನಾರ್ಹ.
ಕಿಮ್ ಜಾಂಗ್ ಉನ್ ಶಸ್ತ್ರಾಸ್ತ್ರ ಶಕ್ತಿ ಪ್ರದರ್ಶನವನ್ನು ಮತ್ತಷ್ಟು ವೇಗಗೊಳಿಸುತ್ತಿದ್ದಾರೆ. ಇದರ ಪರಿಣಾಮ ಅಮೆರಿಕ ಮತ್ತು ಅದರ ಏಷ್ಯಾದ ಮಿತ್ರರಾಷ್ಟ್ರಗಳು ಜಂಟಿ ಮಿಲಿಟರಿ ಕಸರತ್ತುಗಳನ್ನು ನಡೆಸುತ್ತಿವೆ. ಇದರಿಂದ ಕೊರಿಯಾ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದೆಡೆ, ಉತ್ತರ ಕೊರಿಯಾ ಕಳೆದ ಕೆಲವು ವರ್ಷಗಳಿಂದ ತನ್ನ ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯ ವಿಸ್ತರಿಸುತ್ತಿದೆ. ಉತ್ತರ ಕೊರಿಯಾ ಕಳೆದ ವರ್ಷ ಪರಮಾಣು ಸಾಮರ್ಥ್ಯದ ಡ್ರೋನ್ ಪರೀಕ್ಷಿಸಿತ್ತು.
ಮೂರು ದೇಶಗಳ ನೌಕಾಭ್ಯಾಸ: ಈ ವಾರದ ಆರಂಭದಲ್ಲಿ ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಜಪಾನ್ ದಕ್ಷಿಣ ಜೆಜು ದ್ವೀಪದಲ್ಲಿ ಜಂಟಿ ನೌಕಾಭ್ಯಾಸ ನಡೆಸಿದ್ದವು. ಇದಕ್ಕೆ ಉತ್ತರ ಕೊರಿಯಾದ ಹೈಪರ್‌ಸಾನಿಕ್ ಕ್ಷಿಪಣಿ ಉಡಾವಣೆ ಪ್ರತಿಕ್ರಿಯೆ ಎಂದು ಹೇಳಿದ್ದಾರೆ. ವಿಮಾನವಾಹಕ ನೌಕೆ ಯುಎಸ್ಎಸ್ ಕಾರ್ಲ್ ವಿನ್ಸನ್ ಸೇರಿದಂತೆ ಮೂರು ದೇಶಗಳ ಒಂಬತ್ತು ಯುದ್ಧನೌಕೆಗಳು ಈ ಅಭ್ಯಾಸದಲ್ಲಿ ಭಾಗಿಯಾಗಿದ್ದವು.
ಕೆಸಿಎನ್‌ಎ ಪ್ರಕಾರ, ರಕ್ಷಣಾ ಸಚಿವಾಲಯದ ವಕ್ತಾರರು ಶುಕ್ರವಾರ ಈ ಕಸರತ್ತು ಪ್ರಾದೇಶಿಕ ಪರಿಸ್ಥಿತಿಯನ್ನು ಮತ್ತಷ್ಟು ಅಸ್ಥಿರಗೊಳಿಸುವ ಸಾಧ್ಯತೆಯಿದೆ. ಇದು ಉತ್ತರದ ಭದ್ರತೆಯನ್ನು ಗಂಭೀರವಾಗಿ ಅಪಾಯಕ್ಕೆ ತಳ್ಳುವ ಕೆಲಸ ಎಂದಿದ್ದರು. ಉತ್ತರ ಕೊರಿಯಾದ ಪರೀಕ್ಷೆ "ನಮ್ಮ ಮಿಲಿಟರಿಯ ನೀರೊಳಗಿನ ಪರಮಾಣು-ಆಧಾರಿತ ಪ್ರತಿಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.
ಇತ್ತೀಚಿನ ಬೆಳವಣಿಗೆಗಳು ಉಭಯ ಕೊರಿಯಾಗಳ ನಡುವಿನ ದೀರ್ಘಕಾಲದ ಸಂಬಂಧಗಳನ್ನು ಹಾಳು ಮಾಡುತ್ತಿವೆ. ಎರಡೂ ಕಡೆಯವರು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಮುಖ ಒಪ್ಪಂದಗಳನ್ನು ರದ್ದುಗೊಳಿಸಲಾಗಿದೆ. ಗಡಿ ಭದ್ರತೆ ಹೆಚ್ಚಳವಾಗಿದೆ. ಗಡಿಯುದ್ದಕ್ಕೂ ಲೈವ್-ಫೈರ್ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ:ಹೌತಿ ಬಂಡುಕೋರರ ವಿರುದ್ಧ ದಾಳಿ ಮುಂದುವರಿಸಿದ ಅಮೆರಿಕ