ಸಿಯೋಲ್:ಇದೇ ಮೊದಲ ನಿನ್ನೆ(ಗುರುವಾರ) ಬಾರಿಗೆ ಉತ್ತರ ಕೊರಿಯಾದಲ್ಲಿ ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಒಂದು ದಿನದ ನಂತರ, ರಾಷ್ಟ್ರದಾದ್ಯಂತ ಸ್ಫೋಟಕವಾಗಿ ಹರಡಿರುವ ಜ್ವರಕ್ಕೆ ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು 3.5 ಲಕ್ಷ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉತ್ತರ ಕೊರಿಯಾ ಹೇಳಿದೆ.
ಏಪ್ರಿಲ್ ಅಂತ್ಯದಿಂದ ಉತ್ತರ ಕೊರಿಯಾದಲ್ಲಿ 3.5 ಲಕ್ಷ ಜನರು ಜ್ವರದಿಂದ ಬಳಲಿದ್ದು, ಅವರಲ್ಲಿ 1,62,200 ಚೇತರಿಸಿಕೊಂಡಿದ್ದಾರೆ ಎಂದು ಅಧಿಕೃತ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ(KCNA) ಹೇಳಿದೆ. ಗುರುವಾರ ಒಂದೇ ದಿನ 18,000 ಜನರು ಜ್ವರ ರೋಗ ಲಕ್ಷಣಗಳೊಂದಿಗೆ ಹೊಸದಾಗಿ ಕಂಡು ಬಂದಿದ್ದಾರೆ ಮತ್ತು 1,87,800 ಜನರನ್ನು ಚಿಕಿತ್ಸೆಗಾಗಿ ಪ್ರತ್ಯೇಕಿಸಲಾಗುತ್ತಿದೆ. ಸಾವನ್ನಪ್ಪಿದ ಆರು ಜನರಲ್ಲಿ ಒಬ್ಬರು ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಅದು ಹೇಳಿದೆ.
ಕೋವಿಡ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಉತ್ತರ ಕೊರಿಯಾ ಗುರುವಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಿದೆ. ಏ. 25 ರಂದು ಪ್ಯೊಂಗ್ಯಾಂಗ್‌ನಲ್ಲಿ ನಡೆದ ಬೃಹತ್ ಮಿಲಿಟರಿ ಮೆರವಣಿಗೆಯಿಂದ ಸೋಂಕು ಹರಡುವಿಕೆ ವೇಗಗೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯವು, ಮಾನವೀಯ ಪರಿಗಣನೆಗಳ ಆಧಾರದ ಮೇಲೆ ಉತ್ತರ ಕೊರಿಯಾಕ್ಕೆ ವೈದ್ಯಕೀಯ ನೆರವು ಮತ್ತು ಇತರ ಸಹಾಯವನ್ನು ನೀಡಲು ದಕ್ಷಿಣವು ಸಿದ್ಧವಾಗಿದೆ ಎಂದು ಹೇಳಿದೆ.
ದೇಶಕ್ಕೆ ಇದುವರೆಗೆ ಕೋವಿಡ್ ಸಾಂಕ್ರಾಮಿಕ ರೋಗ ಪ್ರವೇಶಿಸಿಲ್ಲ ಎಂದು ಉತ್ತರ ಕೊರಿಯಾ ಪ್ರತಿಪಾದಿಸಿತ್ತು. ಕೊರೊನಾ ವೈರಸ್ ವಿರೋಧಿ ಅಭಿಯಾನವನ್ನು "ರಾಷ್ಟ್ರೀಯ ಅಸ್ತಿತ್ವ" ಎಂದು ವಿವರಿಸುತ್ತಾ, ಉತ್ತರ ಕೊರಿಯಾವು ಗಡಿಯಾಚೆಗಿನ ಸಂಚಾರ ಮತ್ತು ವ್ಯಾಪಾರವನ್ನು ತೀವ್ರವಾಗಿ ನಿರ್ಬಂಧಿಸಿದೆ ಮತ್ತು ತನ್ನ ಗಡಿಯನ್ನು ದಾಟುವ ಯಾವುದೇ ಅತಿಕ್ರಮಣಕಾರರನ್ನು ಕಂಡಲ್ಲಿ ಶೂಟ್ ಮಾಡಲು ಸೈನ್ಯಕ್ಕೆ ಆದೇಶಿಸಿತ್ತು.
ಇದನ್ನೂ ಓದಿ:ಇದೇ ಮೊದಲ ಬಾರಿಗೆ ಉತ್ತರ ಕೊರಿಯಾದಲ್ಲಿ ಒಮಿಕ್ರಾನ್ ಸೋಂಕು ಪತ್ತೆ!