ಮಾಸ್ಕೊ : ಇಸ್ಲಾಮಿಕ್ ದೇಶಗಳು ರಷ್ಯಾದ ಮೇಲಿನ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳನ್ನು ಬೆಂಬಲಿಸುವುದಿಲ್ಲ ಮತ್ತು ಈ ವಾರದ ಕಜಾನ್ ಆರ್ಥಿಕ ವೇದಿಕೆಯಲ್ಲಿ ಸಹಿ ಮಾಡಿದ ಒಪ್ಪಂದಗಳು ಇದನ್ನು ಸಾಬೀತುಪಡಿಸುತ್ತವೆ ಎಂದು ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲಿನ್ ಹೇಳಿದರು. ಕಜಾನ್ನಲ್ಲಿ ಏರ್ಪಡಿಸಲಾಗಿದ್ದ ದಿ ರಷ್ಯಾ ಇಸ್ಲಾಮಿಕ್ ವರ್ಲ್ಡ್ ಫೋರಂ ಅಂಗವಾಗಿ ಇಸ್ಲಾಮಿಕ್ ಸಹಕಾರ ಸಂಘಟನೆಯ ದೇಶಗಳು ಮತ್ತು ರಷ್ಯಾದ ಪ್ರತಿನಿಧಿಗಳ ಮಧ್ಯೆ ನೂರಾರು ಸಭೆಗಳು ನಡೆದಿವೆ ಮತ್ತು 100 ಕ್ಕೂ ಹೆಚ್ಚು ಒಪ್ಪಂದಗಳಿಗೆ ಈ ಸಮಯದಲ್ಲಿ ಸಹಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಫೋರಂ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಒಟ್ಟುಗೂಡಿಸುವ ಸ್ಥಳವಾಗಿದೆ. ಏಕೆಂದರೆ ಮುಸ್ಲಿಂ ಜಗತ್ತಿನ ದೇಶಗಳು ನಮ್ಮನ್ನು ಬೆಂಬಲಿಸುತ್ತವೆ. ಮುಸ್ಲಿಂ ಪ್ರಪಂಚದ ಯಾವುದೇ ದೇಶಗಳು ನಮ್ಮ ವಿರುದ್ಧದ ನಿರ್ಬಂಧಗಳನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರು. ಬೆರಳೆಣಿಕೆಯಷ್ಟು ಅರಬ್ ರಾಷ್ಟ್ರಗಳು ಮುಖ್ಯವಾಗಿ ಸೌದಿ ಅರೇಬಿಯಾ ಮತ್ತು ಈಜಿಪ್ಟ್ ಉಕ್ರೇನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ರಷ್ಯಾವನ್ನು ಔಪಚಾರಿಕವಾಗಿ ಖಂಡಿಸಿದರೂ ಯಾವುದೇ ಇಸ್ಲಾಮಿಕ್ ರಾಷ್ಟ್ರವು ಪಾಶ್ಚಿಮಾತ್ಯ ರಾಷ್ಟ್ರಗಳ ನಾಯಕತ್ವವನ್ನು ಅನುಸರಿಸಲಿಲ್ಲ ಮತ್ತು ಮಾಸ್ಕೋ ಮೇಲೆ ಯಾವುದೇ ಆರ್ಥಿಕ ನಿರ್ಬಂಧಗಳನ್ನು ವಿಧಿಸಿಲ್ಲ ಎಂಬುದು ಗಮನಾರ್ಹ.
ಇಸ್ಲಾಮಿಕ್ ಜಗತ್ತು ಮತ್ತು ರಷ್ಯಾ ನಡುವಿನ ವ್ಯಾಪಾರವು ಅಡೆತಡೆಯಿಲ್ಲದೆ ಮುಂದುವರೆದಿದೆ ಮತ್ತು ಕೃಷಿ ಉತ್ಪನ್ನಗಳು ಮತ್ತು ಹಲಾಲ್ ಆಹಾರ, ಕಚ್ಚಾ ತೈಲ ಸಂಸ್ಕರಣೆ ಮತ್ತು ಬ್ಯಾಂಕಿಂಗ್‌ನ ದ್ವಿಪಕ್ಷೀಯ ಒಪ್ಪಂದಗಳು ಸೇರಿದಂತೆ ಹೆಚ್ಚಿನ ವ್ಯವಹಾರಗಳು ಎಂದಿನಂತೆ ನಡೆಯುತ್ತಿವೆ ಎಂದು ಖುಸ್ನುಲಿನ್ ಬಹಿರಂಗಪಡಿಸಿದರು. ಭಾರತ, ಇರಾನ್, ಅಜರ್‌ಬೈಜಾನ್, ರಷ್ಯಾ, ಮಧ್ಯ ಏಷ್ಯಾ ಮತ್ತು ಯುರೋಪ್ ನಡುವೆ ಸರಕು ಸಾಗಣೆಗಾಗಿ 7,200 ಕಿಮೀ ಅಂತರದ ಹಡಗು, ರೈಲು ಮತ್ತು ರಸ್ತೆ ಮಾರ್ಗಗಳ ಅಂತರರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ ನಿರ್ಮಾಣದಿಂದ ವ್ಯಾಪಾರವನ್ನು ಸುಗಮಗೊಳಿಸಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.