ಸ್ಟಾವಂಜರ್ (ನಾರ್ವೆ): ನೊಬೆಲ್ ಪ್ರಶಸ್ತಿ ವಿಜೇತರ ಘೋಷಣೆಯನ್ನು ಅಕ್ಟೋಬರ್ 2 ರಿಂದ ಪ್ರಾರಂಭಿಸಲಾಗಿದೆ. ಸೋಮವಾರ ವೈದ್ಯಕೀಯ ಕ್ಷೇತ್ರದ ವಿಜೇತರ ಹೆಸರನ್ನು ಘೋಷಿಸುವ ಮೂಲಕ ನೊಬೆಲ್ ಪ್ರಶಸ್ತಿಗಳ ಘೋಷಣೆಗಳನ್ನು ಆರಂಭಿಸಲಾಯಿತು. ಇಂದು (ಅಕ್ಟೋಬರ್ 6) 2023 ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಗುತ್ತಿದೆ. ಸಂಜೆಯ ವೇಳೆಗೆ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರ ಹೆಸರನ್ನು ಬಹಿರಂಗಪಡಿಸಲಾಗುವುದು.
ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ 351 ಅಭ್ಯರ್ಥಿಗಳು ಇದ್ದಾರೆ, ಅದರಲ್ಲಿ 259 ವ್ಯಕ್ತಿಗಳು ಮತ್ತು 92 ಸಂಸ್ಥೆಗಳ ಹೆಸರಿವೆ. ಸತತ ಎಂಟು ವರ್ಷಗಳಿಂದ ಅಭ್ಯರ್ಥಿಗಳ ಸಂಖ್ಯೆ 300 ದಾಟಿದೆ. ಈ ವರ್ಷ ವಕೀಲ ಕೊಹ್ಸರ್, ನರ್ಗೆಸ್ ಮೊಹಮ್ಮದಿ ಫೌಂಡೇಶನ್, ಅಫ್ಘಾನಿಸ್ತಾನದ ಮಹಿಳಾ ಕಾರ್ಯಕರ್ತೆ ಮೆಹಬೂಬಾ ಸೆರ್ರಾಜ್, ಇರಾನಿನ ಹಕ್ಕುಗಳ ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ ಅವರ ಹೆಸರನ್ನು ನೊಬೆಲ್ ಪಟ್ಟಿಯಲ್ಲಿ ಸೇರಿಸಲಾಗಿದೆ.
ಇನ್ನು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಓಸ್ಲೋದ ಶಾಂತಿ ಸಂಶೋಧನಾ ಸಂಸ್ಥೆ ನಿರ್ದೇಶಕ ಹೆನ್ರಿಕ್ ಉರ್ಡಾಲ್ ಅವರು, "ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ವರ್ಷ ಯಾರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂಬ ಬಗ್ಗೆ ಯಾವುದೇ ಸುಳಿವುಗಳನ್ನು ನೀಡಿಲ್ಲ. ನಿರೀಕ್ಷಿಸಿದಂತೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಜೈಲಿನಲ್ಲಿರುವ ರಷ್ಯಾದ ಭಿನ್ನಮತೀಯ ಅಲೆಕ್ಸಿ ನವಲ್ನಿ ಅವರ ಹೆಸರು ಘೋಷಿಸುವ ಸಾಧ್ಯತೆ ಕಡಿಮೆ ಇದೆ. ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದಿಂದ ಸಾವು ಮತ್ತು ವಿನಾಶ ಘಟಿಸುತ್ತಲೇ ಇರುವುದರಿಂದ ಝೆಲೆನ್ಸ್ಕಿ ಅಸಂಭವ ಆಯ್ಕೆಯಂತೆ ತೋರುತ್ತದೆ. ಎರಡು ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿರುವ ಮಧ್ಯೆ ಪ್ರಶಸ್ತಿ ನೀಡಲು ಮುಂದಾಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿಯನ್ನು ಆ ದೇಶದ ಸಂಸತ್ತು ಆಯ್ಕೆ ಮಾಡಿದ ಐದು ಸದಸ್ಯರ ನಾರ್ವೇಜಿಯನ್ ಸಮಿತಿಯು ಆಯ್ಕೆ ಮಾಡುತ್ತದೆ. ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯ ಪ್ರಕಾರ, ರಾಷ್ಟ್ರಗಳ ನಡುವೆ ಸೋದರತ್ವಕ್ಕಾಗಿ ಕೆಲಸ ಮಾಡಿದ ವ್ಯಕ್ತಿಗೆ ನೀಡಲಾಗುತ್ತದೆ, ಸೈನ್ಯವನ್ನು ಕಡಿಮೆ ಮಾಡಿ, ಶಾಂತಿ ಸಮ್ಮೇಳನಗಳನ್ನು ಆಯೋಜಿಸಿದವರಿಗೆ ಈ ಬಹುಮಾನ ನೀಡಲಾಗುವುದು.