ಒಸ್ಲೋ (ನಾರ್ವೆ):ನಾರ್ವೇಜಿಯನ್ ನೊಬೆಲ್ ಸಮಿತಿಯು ಇಂದು 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇರಾನ್ ಹೋರಾಟಗಾರ್ತಿ ನರ್ಗಿಸ್ ಮೊಹಮ್ಮದಿ ಅವರಿಗೆ ಪ್ರಕಟಿಸಿತು. ಇರಾನ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧದ ಹೋರಾಟ ಮತ್ತು ಸಮಾನ ಮಾನವ ಹಕ್ಕುಗಳು, ಸ್ವಾತಂತ್ರ್ಯವನ್ನು ಉತ್ತೇಜಿಸುವ ಅವಿರತ ಹೋರಾಟಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ನರ್ಗಿಸ್ ಮೊಹಮ್ಮದಿ ಸದ್ಯ ಇರಾನ್‌ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
"ಈ ವರ್ಷದ ಶಾಂತಿ ನೊಬೆಲ್ ಪ್ರಶಸ್ತಿಯು ಇರಾನ್ ಆಡಳಿತವು ಮಹಿಳೆಯರನ್ನು ಗುರಿಯಾಗಿಸಿ ನಡೆಸಿದ ತಾರತಮ್ಯ, ದಬ್ಬಾಳಿಕೆ ನೀತಿಗಳ ವಿರುದ್ಧ ಹೋರಾಡಿದ ಅಪಾರ ಜನಸಮೂಹವನ್ನು ಗುರುತಿಸುತ್ತದೆ" ಎಂದು ನೊಬೆಲ್ ಸಮಿತಿ ಹೇಳಿದೆ.
1901ರಿಂದ ನೊಬೆಲ್ ಶಾಂತಿ ಪ್ರಶಸ್ತಿಯನ್ನು 110 ವ್ಯಕ್ತಿಗಳು ಮತ್ತು 30 ಸಂಸ್ಥೆಗಳಿಗೆ ನೀಡಿ ಗೌರವಿಸಲಾಗಿದೆ. ಈ ಹಿಂದಿನ ವಿಜೇತರಲ್ಲಿ ಮಲಾಲಾ ಯೂಸುಫ್‌ಜಾಯ್ ಮತ್ತು ಇಥಿಯೋಪಿಯನ್ ಪ್ರಧಾನಿ ಅಬಿ ಅಹ್ಮದ್ ಸೇರಿದ್ದಾರೆ. ಕೆಲವು ಸಂಸ್ಥೆಗಳಿಗೆ ಹಲವು ಬಾರಿ ಈ ಪ್ರಶಸ್ತಿ ನೀಡಲಾಗಿದೆ. ರೆಡ್‌ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿಗೆ ಮೂರು ಬಾರಿ ಶಾಂತಿ ನೊಬೆಲ್ ಗೌರವ ದೊರೆತಿದೆ. ಅದರಂತೆ ನಿರಾಶ್ರಿತರ ರಕ್ಷಣೆಗಾಗಿ ವಿಶ್ವಸಂಸ್ಥೆ ಹೈಕಮಿಷನರ್ ಕಚೇರಿಗೆ ಎರಡು ನೊಬೆಲ್ ನೀಡಲಾಗಿದೆ.