ಕರ್ನಾಟಕ

karnataka

ETV Bharat / international

ಹಮಾಸ್ ನಾಯಕ ಸಿನ್ವರ್ ಗಾಝಾದಲ್ಲಿ ಯಾರಿಗೂ ಇಷ್ಟವಾಗದ ವ್ಯಕ್ತಿ; ಮಾಜಿ ಸಚಿವರ ಹೇಳಿಕೆ

ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಗಾಝಾ ಪಟ್ಟಿಯಲ್ಲಿ ಯಾರಿಗೂ ಇಷ್ಟವಾಗದ ವ್ಯಕ್ತಿ ಎಂದು ಗಾಝಾ ಪಟ್ಟಿಯ ಮಾಜಿ ಸಂಪರ್ಕ ಸಚಿವ ಯೋಸೆಫ್ ಅಲ್ಮಾನ್ಸಿ ಹೇಳಿದ್ದಾರೆ.

Nobody likes Hamas's Yahya Sinwar in Gaza: Ex-Minister tells Israeli intelligence
Nobody likes Hamas's Yahya Sinwar in Gaza: Ex-Minister tells Israeli intelligence

By ETV Bharat Karnataka Team

Published : Dec 11, 2023, 1:14 PM IST

ಟೆಲ್ ಅವೀವ್: ಹಮಾಸ್ ಉಗ್ರಗಾಮಿ ಗುಂಪಿನ ಹಿರಿಯ ನಾಯಕ ಯಾಹ್ಯಾ ಸಿನ್ವರ್ ಕಂಡರೆ ಗಾಝಾ ಪಟ್ಟಿಯಲ್ಲಿ ಯಾರಿಗೂ ಆಗಲ್ಲ, ಆತನನ್ನು ಯಾರೂ ಇಷ್ಟ ಪಡಲ್ಲ ಎಂದು ಗಾಝಾ ಪಟ್ಟಿಯ ಮಾಜಿ ಸಂಪರ್ಕ ಸಚಿವ ಯೋಸೆಫ್ ಅಲ್ಮಾನ್ಸಿ ಹೇಳಿದ್ದಾರೆ. ಅಲ್ಮಾನ್ಸಿ ಅವರನ್ನು ವಿಚಾರಣೆಗೊಳಪಡಿಸಿರುವ ಇಸ್ರೇಲ್​ನ ಗುಪ್ತಚರ ಸಂಸ್ಥೆ ಶಿನ್ ಬೆಟ್ ಅಧಿಕಾರಿಗಳ ಎದುರು ಅವರು ಈ ಸತ್ಯ ಬಹಿರಂಗಪಡಿಸಿದ್ದಾರೆ.

"ಸಿನ್ವರ್ ಭ್ರಮಾಲೋಕದಲ್ಲಿ ಜೀವಿಸುವ ವ್ಯಕ್ತಿ. ತನ್ನನ್ನು ತಾನು ಎಲ್ಲರಿಗಿಂತ ಶ್ರೇಷ್ಠ ಎಂದುಕೊಳ್ಳುತ್ತಾನೆ. ಸಿನ್ವರ್ ಬೆಂಬಲಿಸುವ ಯಾರನ್ನೂ ಗಾಜಾ ಪಟ್ಟಿಯಲ್ಲಿ ನಾನು ನೋಡಿಲ್ಲ. ದೇವರು ನಮ್ಮನ್ನು ಆತನಿಂದ ಮುಕ್ತಗೊಳಿಸಲಿ ಎಂದು ಹಗಲು ರಾತ್ರಿ ಪ್ರಾರ್ಥಿಸುವ ಜನರಿದ್ದಾರೆ." ಎಂದು ಮಾಜಿ ಸಚಿವರು ಶಿನ್ ಬೆಟ್ ತನಿಖಾಧಿಕಾರಿಗಳಿಗೆ ತಿಳಿಸಿದರು.

"ಗಾಝಾ ಪಟ್ಟಿಯಲ್ಲಿನ ಶೇ 60ಕ್ಕೂ ಹೆಚ್ಚು ಕಟ್ಟಡ, ಮೂಲಸೌಕರ್ಯಗಳು, ಬೀದಿಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ನಾಶಪಡಿಸಿರುವುದೇ ಹಮಾಸ್​ನ ಸಾಧನೆಯಾಗಿದೆ. ಹಮಾಸ್ ಇದೊಂದು ಯಾಹ್ಯಾ ಸಿನ್ವರ್ ನೇತೃತ್ವದ ಹುಚ್ಚರ ಗುಂಪು. ಅವರೆಲ್ಲ ಸೇರಿ ಗಾಝಾ ಪಟ್ಟಿಯನ್ನು ನಾಶಪಡಿಸಿದ್ದಾರೆ. ಗಾಝಾವನ್ನು ಅವರು 200 ವರ್ಷಗಳಷ್ಟು ಹಿಂದಕ್ಕೆ ತಳ್ಳಿದ್ದಾರೆ" ಎಂದು ಅವರು ಹೇಳಿದರು.

ಗಾಝಾ ಪಟ್ಟಿಯೊಳಗಿನ ಉಗ್ರಗಾಮಿ ಗುಂಪಿನ ನಾಯಕನಾಗಿರುವ ಸಿನ್ವರ್, ಆಂತರಿಕ ಭದ್ರತಾ ವಿಷಯಗಳನ್ನು ನಿರ್ವಹಿಸುವ, ಶಂಕಿತ ಇಸ್ರೇಲಿ ಏಜೆಂಟರನ್ನು ತನಿಖೆ ಮಾಡುವ ಮತ್ತು ಇಸ್ರೇಲಿ ಗುಪ್ತಚರ ಮತ್ತು ಭದ್ರತಾ ಸೇವೆಗಳ ಅಧಿಕಾರಿಗಳನ್ನು ಪತ್ತೆಹಚ್ಚುವ ಮಜ್ದ್ ಎಂದು ಕರೆಯಲ್ಪಡುವ ಹಮಾಸ್​ ನ ಭದ್ರತಾ ಸಂಘಟನೆಯ ಸ್ಥಾಪಕನಾಗಿದ್ದಾನೆ. ಸಿನ್ವರ್​ನನ್ನು ಇಸ್ರೇಲ್ ಮೂರು ಬಾರಿ ಬಂಧಿಸಿತ್ತು. 1988 ರಲ್ಲಿ ಮೂರನೇ ಬಂಧನದ ನಂತರ ಆತನಿಗೆ ನಾಲ್ಕು ಅವಧಿಯ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಐದು ವರ್ಷಗಳಿಗಿಂತ ಹೆಚ್ಚು ಕಾಲ ಹಮಾಸ್​ನಿಂದ ಬಂದಿಯಾಗಿದ್ದ ಇಸ್ರೇಲಿ ಸೈನಿಕನೊಬ್ಬನ ಬಿಡುಗಡೆಗೆ ಪ್ರತಿಯಾಗಿ 1027 ಪ್ಯಾಲೆಸ್ಟೈನ್ ಮತ್ತು ಅರಬ್ ಬಂದಿಗಳ ಜೊತೆಗೆ ಯಾಹ್ಯಾ ಸಿನ್ವರ್​ನನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯ ನಂತರ ಸಿನ್ವರ್ ಹಮಾಸ್​ನ ಪ್ರಮುಖ ನಾಯಕನಾಗಿ ಬೆಳೆದು 2017 ರಲ್ಲಿ ಗಾಝಾ ಪಟ್ಟಿಯಲ್ಲಿ ಹಮಾಸ್ ಗುಂಪಿನ ರಾಜಕೀಯ ಬ್ಯೂರೋದ ಮುಖ್ಯಸ್ಥನಾಗಿ ನೇಮಕಗೊಂಡಿದ್ದ. 2015ರಲ್ಲಿ ಅಮೆರಿಕವು ಸಿನ್ವರ್​ನನ್ನು ಅಂತರರಾಷ್ಟ್ರೀಯ ಭಯೋತ್ಪಾದಕರ ಕಪ್ಪುಪಟ್ಟಿಗೆ ಸೇರಿಸಿತ್ತು. ಸದ್ಯ ಇಸ್ರೇಲ್ ಪಡೆಗಳು ಸಿನ್ವರ್​ಗಾಗಿ ಗಾಝಾ ಪಟ್ಟಿಯಲ್ಲಿ ತೀವ್ರ ಹುಡುಕಾಟ ನಡೆಸಿವೆ.

ಇದನ್ನೂ ಓದಿ : ಚೇತರಿಕೆಯತ್ತ ಶ್ರೀಲಂಕಾ ಪ್ರವಾಸೋದ್ಯಮ; 12 ಲಕ್ಷ ಪ್ರವಾಸಿಗರ ಭೇಟಿ, $1.8 ಶತಕೋಟಿ ಆದಾಯ

ABOUT THE AUTHOR

...view details