ಮಿಚಿಗನ್(ಅಮೆರಿಕ) : ಡೆಟ್ರಾಯಿಟ್ ಸಿನಗಾಗ್ ಅಧ್ಯಕ್ಷೆ ಸಮಂತಾ ವೋಲ್ ಹತ್ಯೆಯು ದ್ವೇಷ ಪೂರಿತ ಹತ್ಯೆ ಎಂಬ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಡೆಟ್ರಾಯಿಟ್ಸ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಹತ್ಯೆಯು ಯಹೂದಿಗಳನ್ನು ಗುರಿಯಾಗಿಸಿಕೊಂಡು ನಡೆದಿದೆ ಎಂದು ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಶನಿವಾರ ಸಮಂತಾ ವೋಲ್ ಅವರು ತಮ್ಮ ಮನೆಯ ಹೊರಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರನ್ನು ಚೂರಿ ಇರಿದು ಅಪರಿಚಿತರು ಹತ್ಯೆ ಮಾಡಿದ್ದರು. ಬಳಿಕ ವೋಲ್ ಮೃತಪಟ್ಟಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಮೃತರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜೊತೆಗೆ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ಆರಂಭಿಸಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಸಮಂತಾ ವೋಲ್ ಹತ್ಯೆ ಪ್ರಕರಣದ ತನಿಖೆ ಮುಂದುವರೆದಿದೆ. ಯಹೂದಿಗಳನ್ನು ಗುರಿಯಾಗಿಸಿ ಹತ್ಯೆ ನಡೆಸಲಾಗಿದೆ ಎಂಬ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ತನಿಖೆ ನಡೆಯುವವರೆಗೆ ಜನರು ತಾಳ್ಮೆಯಿಂದ ಇರಬೇಕು. ಪೊಲೀಸರು ಪ್ರಕರಣ ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿ ಜೇಮ್ಸ್ ವೈಟ್ ತಿಳಿಸಿದ್ದಾರೆ.