ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್ನ ಕಠಿಣ ಇಸ್ಲಾಮಿಕ್ ಆಡಳಿತದಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಇದರಿಂದ ಅಪ್ಘನ್ ಮಹಿಳೆಯರು ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ನರಳುವಂತಾಗಿದೆ. ತಾಲಿಬಾನ್ ಆಡಳಿತದಲ್ಲಿ ದೇಶದಲ್ಲಿ ಮಹಿಳೆಯರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಕೆಲಸವಿಲ್ಲದೆ ನಿರುದ್ಯೋಗಿಗಳಾಗಿರುವ ಸಾವಿರಾರು ಮಹಿಳೆಯರು ಆರ್ಥಿಕ ಹಾಗೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಾಲಿಬಾನ್ನ ಇಸ್ಲಾಮಿಕ್ ಆಡಳಿತವನ್ನು ಪ್ರಬಲವಾಗಿ ವಿರೋಧಿಸಿರುವ ಮಹಿಳೆಯರು ತಮ್ಮ ಆರ್ಥಿಕ ಮುಗ್ಗಟ್ಟಿಗೆ ಕೊನೆಗಾಣಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ದೇಶದ ಆರ್ಥಿಕ ಏಳಿಗೆಗಾಗಿ ಮಹಿಳೆ ಮತ್ತು ಪುರುಷರಿಬ್ಬರಿಗೂ ಕೆಲಸ ಮಾಡುವ ಅವಕಾಶ ನೀಡಬೇಕೆಂದು ಕಾಬೂಲ್ ಜನತೆ ತಾಲಿಬಾನ್ಗೆ ಒತ್ತಾಯಿಸುತ್ತಿದ್ದಾರೆ. ಶಿಕ್ಷಣದ ಮೇಲಿನ ನಿಷೇಧ, ಅಫ್ಘಾನ್ ಹುಡುಗಿಯರು ಮತ್ತು ಮಹಿಳೆಯರಿಗೆ ಕೆಲಸದ ನಿಷೇಧಗಳಿಂದ ದೇಶದಲ್ಲಿ ಬಾಲ್ಯ ವಿವಾಹ, ಹಿಂಸೆಗಳು ಹೆಚ್ಚಾಗುತ್ತಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮಹಿಳೆಯರು ಮತ್ತು ಬಾಲಕಿಯರಿಗೆ ಶಿಕ್ಷಣ ಹಾಗೂ ಕೆಲಸದ ಮೇಲೆ ನಿಷೇಧ ವಿಧಿಸಿರುವುದು ಇಸ್ಲಾಮಿಕ್ ಕಾನೂನಿನ ಉಲ್ಲಂಘನೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಸೇರಿದಂತೆ ವಿಶ್ವದ ಹಲವು ಇಸ್ಲಾಮಿಕ್ ರಾಷ್ಟ್ರಗಳು ಮತ್ತು ಸಂಸ್ಥೆಗಳು ಖಂಡಿಸಿವೆ. ಆಗಸ್ಟ್ 15, 2021 ರಿಂದ ತಾಲಿಬಾನ್ ಆಡಳಿತದ ಅಧಿಕಾರಿಗಳು ಬಾಲಕಿಯರು ಮಾಧ್ಯಮಿಕ ಶಾಲೆಗೆ ಹೋಗುವುದನ್ನು ನಿರ್ಬಂಧಿಸಿದ್ದಾರೆ. ದೇಶದಲ್ಲಿ ಮಹಿಳೆಯರು ಮತ್ತು ಯುವತಿಯರ ಚಲನೆಯ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗಿದೆ. ಮಹಿಳೆಯರು ಉದ್ಯಾನ ವನಗಳು, ಜಿಮ್‌ಗಳು ಮತ್ತು ಸಾರ್ವಜನಿಕ ಸ್ನಾನ ಗೃಹಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.