ಜೆರುಸಲೇಂ: 'ಗಾಜಾ ಜೇಡರ ಬಲೆಯಂತೆ ಇದೆ. ಅಲ್ಲಿ ನಮ್ಮನ್ನು ಎಳೆದೊಯ್ದು ಒಂದು ದೊಡ್ಡ ಕೊಠಡಿಯಲ್ಲಿ ಕೂಡಿ ಹಾಕಿದರು. ಸೆರೆಯಾಳುಗಳಿಗೆ ದಿನಕ್ಕೆ ಒಂದೇ ಹೊತ್ತು ಊಟ ನೀಡಿದರು. ನಮ್ಮನ್ನು ಕಾಯುವ ಉಗ್ರರಿಗೂ ಕೂಡ ಒಂದೊತ್ತು ಊಟ. ಅವರಿಗೆ ವೃದ್ಧರು ಮಕ್ಕಳೆಂಬ ಭೇದವೇ ಇಲ್ಲ..! ಇದು ಅಕ್ಟೋಬರ್ 7 ರಂದು ಹಮಾಸ್ ದಾಳಿಯಲ್ಲಿ ಸಿಲುಕಿ 2 ವಾರಗಳ ಕಾಲ ಒತ್ತೆಯಾಳಾಗಿದ್ದು, ಮಂಗಳವಾರ ಬಿಡುಗಡೆಯಾದ ಇಸ್ರೇಲ್ ಮಹಿಳೆ ಬಿಡಿಸಿಟ್ಟ 'ಗಾಜಾ ಎಂಬ ನರಕ'ದ ಚಿತ್ರಣ.
200ಕ್ಕೂ ಅಧಿಕ ಒತ್ತೆಯಾಳುಗಳು ತನ್ನಲ್ಲಿರುವುದಾಗಿ ಹೇಳಿರುವ ಹಮಾಸ್ ಉಗ್ರರು, ಇಲ್ಲಿಯವರೆಗೆ ನಾಲ್ವರನ್ನು ಮಾತ್ರ ಬಿಡುಗಡೆ ಮಾಡಿದೆ. ಅದರಲ್ಲಿ ಇಬ್ಬರು ಇಸ್ರೇಲಿಗರಾಗಿದ್ದರೆ, ಇನ್ನಿಬ್ಬರು ಅಮೆರಿಕನ್ನರಾಗಿದ್ದಾರೆ. ಅದರಲ್ಲಿ ಮಂಗಳವಾರ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಬಂದಿರುವ 85 ವರ್ಷದ ಯೋಚೆವೆಡ್ ಲಿಫ್ಶಿಟ್ಜ್ ಅವರು ಒತ್ತೆಯಾಳಾಗಿದ್ದ ವೇಳೆಯ ಘಟನಾವಳಿಗಳ ಬಗ್ಗೆ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
'ಅಂದು ಉಗ್ರರು ಬಂದೂಕುಗಳ ಸಮೇತ ದಾಳಿ ಮಾಡಿದರು. ಸಿಕ್ಕಸಿಕ್ಕವರನ್ನು ಎಳೆದೊಯ್ದರು. ಅದರಲ್ಲಿ ನಾನೂ ಕೂಡ ಇದ್ದೆ. ಸುರಂಗದಂತಿದ್ದ ಜಾಲಕ್ಕೆ ನಮ್ಮನ್ನು ಎಳೆದೊಯ್ದರು. ಹಲವಾರು ಕಿಲೋಮೀಟರ್‌ಗಳಷ್ಟು ನಡೆಸಿದರು. ಅಲ್ಲೊಂದು ದೊಡ್ಡ ಕೋಣೆಗೆ ಕರೆದೊಯ್ದರು. ಅಲ್ಲಿ 25 ಜನರನ್ನು ಕೂಡಿ ಹಾಕಲಾಯಿತು. ನಂತರ ಇತರ ನಾಲ್ವರ ಜತೆಗೆ ನಮ್ಮನ್ನು ಸಣ್ಣ ಗುಂಪಾಗಿ ಪ್ರತ್ಯೇಕಿಸಲಾಯಿತು.'
ಕುರಾನ್ ಮೇಲೆ ನಂಬಿಕೆ, ನಿಮಗೆ ನೋಯಿಸಲ್ಲ: 'ನಮ್ಮನ್ನು ಕಾಯಲು ನಿಯೋಜಿಸಲಾಗಿದ್ದ ಜನರು, ನಾವು ಕುರಾನ್ ಅನ್ನು ನಂಬುತ್ತೇವೆ. ನಿಮಗೆ ಯಾವುದೇ ನೋವು ಮಾಡುವುದಿಲ್ಲ ಎನ್ನುತ್ತಿದ್ದರು. ಒತ್ತೆಯಾಳುಗಳನ್ನು ಚೆನ್ನಾಗಿ ನಡೆಸಿಕೊಂಡರು. ಔಷಧಿ ಸೇರಿದಂತೆ ವೈದ್ಯಕೀಯ ಆರೈಕೆಯನ್ನು ನೀಡಿದರು. ಆದರೆ, ಒಂದು ಹೊತ್ತು ಮಾತ್ರ ಊಟ ನೀಡುತ್ತಿದ್ದರು. ಚೀಸ್, ಸೌತೆಕಾಯಿ ಮತ್ತು ಪಿಟಾವನ್ನು ನೀಡಲಾಯಿತು. ಅವರು ಕೂಡ ಅದೇ ತಿನ್ನುತ್ತಿದ್ದರು' ಎಂದು ಹೇಳಿದರು.
'85 ವರ್ಷದ ಪತಿ ಓಡೆಡ್ ಗಾಜಾದಲ್ಲಿ ಇನ್ನೂ ಒತ್ತೆಯಾಳಾಗಿದ್ದಾರೆ. ಹಲವರ ಮೇಲೆ ಹಲ್ಲೆ ಕೂಡ ನಡೆಸಲಾಗಿದೆ. ಕೋಣೆಗಳಲ್ಲಿ ಬಂಧಿಸಿಡಲಾಗಿದೆ. ಗಡಿಯಾರ ಮತ್ತು ಆಭರಣಗಳನ್ನು ಕಿತ್ತುಕೊಂಡರು. ಕೋಲುಗಳಿಂದ ಹೊಡೆದರು. ಉಸಿರಾಡಲೂ ನಮಗೆ ಕಷ್ಟವಾಯಿತು' ಎಂದು ಅವರು ವಿವರಿಸಿದರು.
ಎಚ್ಚರಿಕೆ ಕಡೆಗಣಿಸಿದ ಇಸ್ರೇಲ್ ಸರ್ಕಾರ:ಇದೇ ವೇಳೆ ತಮ್ಮದೇ ಸರ್ಕಾರವನ್ನು ಜರಿದಿರುವ ವೃದ್ಧ ಮಹಿಳೆ, 'ಹಮಾಸ್ ಉಗ್ರರು ಅಕ್ಟೋಬರ್ 7ರಂದು ನಡೆಸಿದ ದಾಳಿಗೂ ಮೊದಲೇ ಅವರು ಇತ್ತದ್ದೊಂದು ದೊಡ್ಡ ಅನಾಹುತ ಉಂಟು ಮಾಡುವ ಮುನ್ಸೂಚನೆಯನ್ನು ನೀಡಿದ್ದರು. ಬೆಂಕಿಯ ಬಲೂನ್ಗಳನ್ನು ಹಾರಿಬಿಟ್ಟು ಹೊಲಗದ್ದೆಗಳನ್ನು ನಾಶ ಮಾಡಿದ್ದರು. ಗಡಿ ರಸ್ತೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪ್ಯಾಲೆಸ್ಟೈನಿಯನ್ನರು ಜಮಾಯಿಸಿದ್ದರು. ಈ ಎಲ್ಲಾ ಸೂಚನೆಗಳನ್ನು ಇಸ್ರೇಲ್ ಸೇನೆ ನಿರ್ಲಕ್ಷಿಸಿತು. 'ಈಗ ನಾವು ಸರ್ಕಾರದ ಬಲಿಪಶುಗಳಾಗಿದ್ದೇವೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ: ಟೆಲ್ ಅವಿವ್ಗೆ ಫ್ರಾನ್ಸ್ ಅಧ್ಯಕ್ಷ ಭೇಟಿ, 24 ಗಂಟೆಯಲ್ಲಿ 400 ಹಮಾಸ್ ಉಗ್ರ ನೆಲೆ ಧ್ವಂಸ