ಮಿಲನ್( ಇಟಲಿ): ಇಟಲಿಯ ಇಶಿಯಾ ದ್ವೀಪದಲ್ಲಿ ಭಾರಿ ಪ್ರಮಾಣದ ಭೂ ಕುಸಿತ ಸಂಭವಿಸಿ, ಮೂರು ವಾರಗಳ ಹಸುಳೆ ಸೇರಿ ಏಳು ಜನ ಮೃತಪಟ್ಟಿದ್ದಾರೆ. ನೇಪಲ್ಸ್ ಪ್ರಿಫೆಕ್ಟ್ ನಲ್ಲಿ ಐದು ಜನರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ.
ಶನಿವಾರ ಮುಂಜಾನೆ ಭೂಸಿತ ಸಂಭವಿಸಿದ್ದು,ಅನೇಕರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ. ಭೂಕುಸಿತದಿಂದ ಭಾರಿ ಪ್ರಮಾಣದ ಹಾನಿಯಾಗಿದೆ. ಪಟ್ಟಣದ ಒಂದು ಭಾಗ ಭಾರಿ ಹಾನಿಗೊಳಗಾಗಿದೆ. ಅತಿಯಾದ ಮಳೆಯಿಂದಾಗಿ ಪರ್ವತದ ಭಾಗವು ಸಡಿಲಗೊಂಡಿದ್ದು, ಬದುಕುಳಿದವರಿಗಾಗಿ ಶೋಧ ಮುಂದುವರೆದಿದೆ.
ಪೋಪ್ ಫ್ರಾನ್ಸಿಸ್ ಇಶಿಯಾ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದರು. ಸಂತ್ರಸ್ತರು, ಸಂಕಷ್ಟದಲ್ಲಿರುವವರಿಗೆ ನೆರವು ನೀಡುವಂತೆ ಹಾಗೂ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ಎಲ್ಲರಿಗೂ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.