ನ್ಯೂಯಾರ್ಕ್ ( ಅಮೆರಿಕ): ಸರ್ಕಾರಿ ಸ್ವಾಮ್ಯದ ಸಾಧನಗಳಲ್ಲಿ ಟಿಕ್‌ಟಾಕ್ ಅನ್ನು ಬ್ಯಾನ್ ಮಾಡಿ ನ್ಯೂಯಾರ್ಕ್ ಆಡಳಿತ ಆದೇಶಿಸಿದೆ. ಭದ್ರತಾ ಕಾಳಜಿಯ ಕಾರಣದಿಂದಾಗಿ ಅಲ್ಲಿನ ಸ್ಥಳೀಯ ಆಡಳಿತ ಟಿಕ್‌ಟಾಕ್ ನಿಷೇಧಿಸಿದೆ. ಈ ಕಿರು ವಿಡಿಯೋ ಅಪ್ಲಿಕೇಶನ್ ಪ್ರವೇಶ ನಿರ್ಬಂಧಿಸಿರುವ 24 ರಾಜ್ಯಗಳ ಪಟ್ಟಿಗೆ ಈಗ ನ್ಯೂಯಾರ್ಕ್ ರಾಜ್ಯ ಸಹ ಸೇರಿಕೊಂಡಿದೆ ಎಂದು ಅಮೆರಿಕ ಪ್ರಮುಖ ಪತ್ರಿಕೆ ವರದಿ ಮಾಡಿದೆ.
ಚೀನಾದ ಕಂಪನಿ ಬೈಟ್‌ಡ್ಯಾನ್ಸ್ ಒಡೆತನದ ಈ ಟಿಕ್‌ಟಾಕ್ ಅಪ್ಲಿಕೇಶನ್, ಬಳಕೆದಾರರ ಡೇಟಾಗೆ ಬೀಜಿಂಗ್ ಪ್ರವೇಶ ಮಾಡಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ನ್ಯೂಯಾರ್ಕ್ನ ರಾಜ್ಯಾಡಳಿತ ಈ ಕ್ರಮ ಕೈಗೊಂಡಿದೆ. ನ್ಯೂಯಾರ್ಕ್ನ ಮೇಯರ್ ಎರಿಕ್ ಆಡಮ್ಸ್ ಅವರ ವಕ್ತಾರ ಜೋನಾ ಅಲನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಗರದ ಸೈಬರ್ ಕಮಾಂಡ್ ಶಿಫಾರಿಸಿನ ಅನ್ವಯ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿರುವ ಅವರು, ನಗರದ ತಾಂತ್ರಿಕ ನೆಟ್‌ವರ್ಕ್‌ಗಳಿಗೆ ಭದ್ರತಾ ಬೆದರಿಕೆ ಇದೆ. ಹೀಗಾಗಿ ಈ ಅಪ್ಲಿಕೇಶನ್ ಬಳಕೆ ತಡೆ ಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿನ ಎಲ್ಲ ಏಜೆನ್ಸಿಗಳು 30 ದಿನಗಳ ಒಳಗೆ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಅನ್ ಇನ್ಸ್ಟಾಲ್ ಮಾಡಬೇಕು ಎಂದು ಸೂಚಿಸಿದೆ. ಉದ್ಯೋಗಿಗಳು ಸರ್ಕಾರ ಒದಗಿಸಿರುವ ಮೊಬೈಲ್ ಸಾಧನಗಳು ಮತ್ತು ನೆಟ್‌ವರ್ಕ್‌ಗಳಿಂದ TikTok ಮತ್ತು ಅದರ ವೆಬ್‌ಸೈಟ್‌ಗೆ ಪ್ರವೇಶವನ್ನು ನೀಡಲು ಇನ್ಮುಂದೆ ಸಾಧ್ಯವಾಗುವುದಿಲ್ಲ ಎಂದು ನ್ಯೂ ಯಾರ್ಕ್ ಆಡಳಿತ ತನ್ನ ಆದೇಶದಲ್ಲಿ ತಿಳಿಸಿದೆ. ನ್ಯೂಯಾರ್ಕ್ ರಾಜ್ಯಾಡಳಿತ ಕೆಲವು ವಿನಾಯಿತಿಗಳೊಂದಿಗೆ ಮೂರು ವರ್ಷಗಳಿಗೂ ಹೆಚ್ಚು ಕಾಲ TikTok ನಿಷೇಧಿಸಿ ಆದೇಶಿಸಿದೆ.