ನ್ಯೂಯಾರ್ಕ್: ನ್ಯೂಯಾರ್ಕ್ನ ಪೆಟ್ ಸ್ಟೋರ್ಗಳಲ್ಲಿ ವಾಣಿಜ್ಯ ದೃಷ್ಟಿಯಿಂದ ನಡೆಯುವ ಸಂತಾನೋತ್ಪತ್ತಿ ಕಾರ್ಯಾಚರಣೆ ಹತೋಟಿಗೆ ತರುವ ನಿಟ್ಟಿನಲ್ಲಿ ಪೆಟ್ ಸ್ಟೋರ್ಗಳಲ್ಲಿ ನಾಯಿಗಳು, ಬೆಕ್ಕುಗಳು ಮತ್ತು ಮೊಲಗಳ ಮಾರಾಟಕ್ಕೆ ನಿಷೇಧ ಹೇರುವ ಹೊಸ ಮಸೂದೆಗೆ ಗುರುವಾರ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅಂಗೀಕಾರ ಸೂಚಿಸಿದ್ದಾರೆ.
ಪೆಟ್ ಸ್ಟೋರ್ಗಳು ಮತ್ತು ಇತರ ಸಾಮೂಹಿಕ ಸಂತಾನೋತ್ಪತ್ತಿ ಕೇಂದ್ರಗಳಲ್ಲಿ ಬ್ರೀಡ್ ತಯಾರಿಸಲು ಪ್ರಾಣಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಮಾತ್ರವಲ್ಲದೇ ಅವುಗಳ ಮೇಲೆ ಕ್ರೌರ್ಯ ನಡೆಯುತ್ತದೆ. ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು 'ದ ಅಮೆರಿಕನ್ ಸೊಸೈಟಿ ಫಾರ್ ದ ಪ್ರಿವೆನ್ಷನ್ ಆಫ್ ಕ್ರ್ಯುಯೆಲ್ಟಿ ಟು ಅನಿಮಲ್ಸ್' ಸೇರಿದಂತೆ ಕೆಲವು ಪ್ರಾಣಿದಯಾ ಕಾರ್ಯಕರ್ತರು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದರು.
ಮಾರಾಟಕ್ಕೆ ಷರತ್ತುಗಳು ಅನ್ವಯ:2024 ರಲ್ಲಿ ಈ ಮಸೂದೆ ಕಾನೂನಾಗಿ ಜಾರಿಗೆ ಬರಲಿದ್ದು, ಅಪಘಾತದಲ್ಲಿ ರಕ್ಷಿಸಿದ ಅಥವಾ ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪ್ರಾಣಿಗಳನ್ನು ರಕ್ಷಿಸಿ ದತ್ತುಪಡೆಯುವ ಪೆಟ್ ಸ್ಟೋರ್ಗಳು ಕಾರ್ಯನಿರ್ವಹಿಸಲು ಈ ಕಾನೂನು ಅನುಮತಿಸುತ್ತದೆ. ಈ ಕಾನೂನಿನ ಪ್ರಕಾರ ಬ್ರೀಡರ್ಗಳು ವರ್ಷಕ್ಕೆ ಒಂಬತ್ತಕ್ಕಿಂತ ಹೆಚ್ಚು ಪ್ರಾಣಿಗಳನ್ನು ಮಾರಾಟ ಮಾಡುವಂತಿಲ್ಲ.
ನಿಯಮ ಉಲ್ಲಂಘಿಸಿದಲ್ಲಿ ಭಾರಿ ದಂಡ:ಅದಷ್ಟೇ ಅಲ್ಲದೆ ಹಿಂದೆ ಸಾಕುಪ್ರಾಣಿಗಳನ್ನು ಮಾರಾಟ ಮಾಡುತ್ತಿದ್ದ ಚಿಲ್ಲರೆ ಅಂಗಡಿಗಳು ಮುಂದೆಯೂ ಕಾರ್ಯನಿರ್ವಹಿಸಬಹುದು. ಸಾಕುಪ್ರಾಣಿಗಳ ಸರಬರಾಜು ಮತ್ತು ಇತರ ಪರಿಕರಗಳನ್ನು ಮಾರಾಟ ಮಾಡಬಹುದು. ದತ್ತು ಪ್ರಾಣಿಗಳಿಗೆ ತಮ್ಮಲ್ಲಿ ಜಾಗ ನೀಡಬಹುದು. ಕಾರ್ಯಕರ್ತರು ರಕ್ಷಿಸಿ ತಂದ ಪ್ರಾಣಿಗಳನ್ನು ತಮ್ಮ ಜಾಗದಲ್ಲಿರಿಸಿಕೊಳ್ಳಲು ಬಾಡಿಗೆ ವಿಧಿಸುವ ಅವಕಾಶ ಒದಗಿಸಲಾಗಿದೆ. ಒಂದು ವೇಳೆ ಅಂಗಡಿ ಮಾಲೀಕರು ಹೊಸ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಅವರ ಮೇಲೆ $1,000 ದಂಡ ವಿಧಿಸಲಾಗುತ್ತದೆ.