ಅಂಕಾರಾ:ಎರಡು ಪ್ರಬಲ ಭೂಕಂಪನಕ್ಕೆ ಟರ್ಕಿ ಮತ್ತು ಸಿರಿಯಾ ನಲುಗಿರುವ ಮಧ್ಯೆಯೇ ಮತ್ತೊಂದು ಭೂಕಂಪ ಉಭಯ ದೇಶಗಳನ್ನು ನಡುಗಿಸಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಕಂಪನ ದಾಖಲಾಗಿದೆ. ಇದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಹೊಸ ಭೂಕಂಪನದಲ್ಲಿ ಮೂವರು ಸಾವನ್ನಪ್ಪಿದ್ದು, 213 ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಹೇಳಿದ್ದಾರೆ. ಮತ್ತೆ ಮೂರು ಕಟ್ಟಡಗಳು ಕುಸಿದುಬಿದ್ದಿದ್ದು, ಅದರಲ್ಲಿ ಜನರು ಸಿಲುಕಿರುವ ಬಗ್ಗೆ ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಅವಶೇಷಗಳಡಿ ಐವರು ಸಿಲುಕಿಕೊಂಡಿದ್ದಾರೆ ಎಂದು ಟರ್ಕಿ ವಿದೇಶಾಂಗ ಸಚಿವರು ಹೇಳಿದ್ದಾರೆ. ಎರಡು ವಾರಗಳ ಹಿಂದೆ ನಡೆದ ಭೂಕಂಪದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಹೊಸ ಭೂಕಂಪದಲ್ಲಿ ಹಲವಾರು ಕಟ್ಟಡಗಳು ಕುಸಿದಿವೆ. ಜನರು ಅದರೊಳಗೆ ಸಿಲುಕಿಕೊಂಡಿದ್ದಾರೆ. ಮೊದಲ ಭೂಕಂಪನದ ಬಳಿಕ ಜನರು ತಮ್ಮ ಮನೆಗಳಿಗೆ ಹಿಂದಿರುಗಿ ಹಾನಿಗೊಳಗಾದ ಕಟ್ಟಡಗಳಿಂದ ವಸ್ತುಗಳನ್ನು ಸ್ಥಳಾಂತರಿಸುವ ಯತ್ನದಲ್ಲಿದ್ದಾಗ ಹೊಸ ಕಂಪನಕ್ಕೆ ಸಿಲುಕಿದ್ದಾರೆ. ವಾಲಿಕೊಂಡಿದ್ದ, ಹಾನಿಗೀಡಾಗಿದ್ದ ಮನೆಗಳು, ಕಟ್ಟಡಗಳು ನಿನ್ನೆಯ ಕಂಪನಕ್ಕೆ ಸಂಪೂರ್ಣ ನೆಲಕಚ್ಚಿವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆಯ ಹೊಸ ವಿದ್ಯಮಾನದಲ್ಲಿ ಟರ್ಕಿಯಲ್ಲಿ ಕನಿಷ್ಠ 8 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರಿಯಾದಲ್ಲಿ 6 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಹಟೇ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯ ವೇಳೆ 3 ಅಂತಸ್ತಿನ ಕಟ್ಟಡದೊಳಗೆ ಸಿಕ್ಕಿಬಿದ್ದ ಒಬ್ಬಾತನನ್ನು ರಕ್ಷಿಸಲಾಗಿದೆ. ಇನ್ನೂ ಮೂವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಶೋಧ ಕಾರ್ಯ ನಡೆಯುತ್ತಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ.