ಗಾಜಾ ಪಟ್ಟಿ:'ಹಮಾಸ್ ಉಗ್ರರು ತಮ್ಮಲ್ಲಿ ಒತ್ತೆಯಿಟ್ಟುಕೊಂಡಿರುವ 239 ಇಸ್ರೇಲಿಗರನ್ನು ಬಿಡುಗಡೆ ಮಾಡುವವರೆಗೂ ಕದನ ವಿರಾಮ ಘೋಷಿಸುವುದಿಲ್ಲ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಡಕ್ ಹೇಳಿಕೆ ನೀಡಿದ್ದಾರೆ.
ಗಾಜಾದ ಜನರು ಸೌಕರ್ಯಗಳ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಕಾರಣ, ಕದನ ವಿರಾಮ ನೀಡಬೇಕು ಎಂದು ಅಂತಾರಾಷ್ಟ್ರೀಯ ನಾಯಕರು ಒತ್ತಡ ಹೇರುತ್ತಿದ್ದಾರೆ. ಈ ಮಧ್ಯೆ ದೂರದರ್ಶನದಲ್ಲಿ ಶನಿವಾರ ಮಾತನಾಡಿರುವ ನೆತನ್ಯಾಹು, 'ಗಾಜಾದಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ಉಗ್ರಗಾಮಿಗಳನ್ನು ಹತ್ತಿಕ್ಕಲು ಇಸ್ರೇಲ್ ಯುದ್ಧ ನಡೆಸುತ್ತಿದೆ. ಇದು ತಾರ್ಕಿಕ ಅಂತ್ಯ ಕಾಣುವವರೆಗೆ ಮುಂದುವರಿಯಲಿದೆ. ಉಗ್ರರ ವಶದಲ್ಲಿರುವ ನಮ್ಮವರು ಬಿಡುಗಡೆ ಆಗುವವರೆಗೆ ಕದನ ವಿರಾಮದ ಮಾತಿಲ್ಲ' ಎಂದು ಘೋಷಿಸಿದ್ದಾರೆ.
ಗಾಜಾ ಮೇಲೆ ಸೇನಾ ನಿಯಂತ್ರಣ:ಗಾಜಾದಲ್ಲಿ ಅಡಗಿರುವ ಹಮಾಸ್ ಉಗ್ರರನ್ನು ಸದೆಬಡಿದ ಬಳಿಕ, ಅಲ್ಲಿಂದ ನಮ್ಮ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗುವುದು. ಅಲ್ಲಿಯವರೆಗೆ ಇಡೀ ಪ್ರದೇಶದ ಮೇಲೆ ನಮ್ಮ ಸೇನಾ ಹಿಡಿತ ಸಾಧಿಸಲಾಗುವುದು. ಇನ್ನು ಮುಂದೆಯೂ ಉಗ್ರಗಾಮಿಗಳನ್ನು ಬೇಟೆಯಾಡಲು ಇಸ್ರೇಲಿ ಪಡೆಗಳು ಗಾಜಾವನ್ನು ಮುಕ್ತವಾಗಿ ಪ್ರವೇಶಿಸಲು ಶಕ್ತವಾಗಿರಬೇಕು. ಪ್ರಸ್ತುತ ಇಸ್ರೇಲ್ ವಶದಲ್ಲಿರುವ ವೆಸ್ಟ್ ಬ್ಯಾಂಕ್ ಪ್ರದೇಶದ ಜೊತೆಗೆ ಗಾಜಾದ ಮೇಲೆ ಪ್ಯಾಲೆಸ್ಟೈನಿಯನ್ನರು ಅಧಿಕಾರ ನಡೆಸುತ್ತಿದ್ದಾರೆ ಎಂಬುದನ್ನು ನೆತನ್ಯಾಹು ತಳ್ಳಿ ಹಾಕಿದ್ದಾರೆ. ಅಲ್ಲಿ ಹಮಾಸ್ ಉಗ್ರರ ಅಧಿಪತ್ಯವಿದೆ ಎಂದು ಹೇಳಿದ್ದಾರೆ.
ಗಾಜಾದ ಮೇಲೆ ಇಸ್ರೇಲ್ನ ಮರುಆಕ್ರಮಣವನ್ನು ಅಮೆರಿಕ ವಿರೋಧಿಸುತ್ತದೆ. ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಎರಡರಲ್ಲೂ ಏಕೀಕೃತ ಪ್ಯಾಲೆಸ್ಟೈಸ್ಟಿನಿಯನ್ ಸರ್ಕಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಸದ್ಯಕ್ಕೆ, ಹಮಾಸ್ ವಿರುದ್ಧದ ಯುದ್ಧವು ಮುಂದುವರಿಯುತ್ತದೆ. ಗೆಲ್ಲುವುದೊಂದೇ ನಮ್ಮ ಏಕೈಕ ಗುರಿ ಎಂದು ನೆತನ್ಯಾಹು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಇಂಧನ ಖಾಲಿ:ಗಾಜಾದ ದೊಡ್ಡ ಆಸ್ಪತ್ರೆಯಾದ ಶಿಫಾದಲ್ಲಿ ಇಂಧನ ಮತ್ತು ವಿದ್ಯುತ್ ಕೊರತೆ ಉಂಟಾಗಿದ್ದು, ಅಲ್ಲಿದ್ದ ಕೊನೆಯ ಜನರೇಟರ್‌ನಲ್ಲಿ ಇಂಧನ ಖಾಲಿಯಾಗಿ ಹಸುಗೂಸು ಮತ್ತು ನಾಲ್ವರು ರೋಗಿಗಳು ಸಾವಿಗೀಡಾಗಿದ್ದಾರೆ. ಇನ್ಕ್ಯುಬೇಟರ್ನಲ್ಲಿ ಜನಿಸಿದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಇಲ್ಲವಾಗಿದೆ. ಯುದ್ಧದಲ್ಲಿ ಗಾಯಗೊಂಡ ಸಾವಿರಾರು ಜನರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಸೌಕರ್ಯಗಳ ಕೊರತೆಯಿಂದ ಆಸ್ಪತ್ರೆ ಮಸಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇಸ್ರೇಲ್ ಪಡೆಗಳು ಆಸ್ಪತ್ರೆಯ ಸುತ್ತ ದಾಳಿ ನಡೆಸುತ್ತಿವೆ. ಇದರಿಂದ ಸೌಕರ್ಯಗಳು ನಿಂತು ಹೋಗಿವೆ. ಇಸ್ರೇಲ್ ವಿವೇಚನಾರಹಿತವಾಗಿ ದಾಳಿ ಮಾಡುತ್ತಿದೆ. ಇದರಿಂದ ವಿದ್ಯುತ್, ಇಂಧನ ಸರಬರಾಜು ಸ್ಥಗಿತವಾಗಿದೆ. ರೋಗಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಅಲ್ಲಿನ ವೈದ್ಯರು ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಯ ಕೆಳಗೆ ಹಮಾಸ್ ಉಗ್ರರು ಬಂಕರ್ಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲಿನ ಜನರನ್ನು ಮಾನವ ಗುರಾಣಿಗಳನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ದಾಳಿ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಇದನ್ನೂ ಓದಿ:ಅಲ್-ಶಿಫಾ ಆಸ್ಪತ್ರೆಯಲ್ಲಿನ ಶಿಶುಗಳ ರಕ್ಷಣೆಗೆ ಸಹಾಯ ಮಾಡಲಿದೆ ಇಸ್ರೇಲ್