ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಕದನ ವಿರಾಮದ ಸಮಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಗಾಜಾ ಪಟ್ಟಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಇಸ್ರೇಲಿ ಸೈನಿಕರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಈ ಕುರಿತು ಇಸ್ರೇಲ್ ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಪ್ರಧಾನಿ ಕಚೇರಿಯಿಂದ ಹೊರಡಿಸಲಾದ ಹೇಳಿಕೆಯಂತೆ, ನೆತನ್ಯಾಹು ಅವರು ಸೈನಿಕರು ಮತ್ತು ಕಮಾಂಡರ್‌ಗಳೊಂದಿಗೆ ಮಾತನಾಡಿದ್ದಾರೆ. ಹಮಾಸ್‌ನ ಸುರಂಗಗಳ ಪೈಕಿ ಒಂದಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಯುದ್ಧದ ಎಲ್ಲಾ ಗುರಿಗಳನ್ನು ಸಾಧಿಸುವ ಶಕ್ತಿ, ಇಚ್ಛೆ ಮತ್ತು ನಿರ್ಣಯವನ್ನು ನಾವು ಹೊಂದಿದ್ದು, ಅದನ್ನು ಸಾಧಿಸಿಯೇ ತೀರುತ್ತೇವೆ. ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಕೊನೆಯವರೆಗೂ ಹೋರಾಟ ಮುಂದುವರೆಸೋಣ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.
ಸೈನಿಕರಿಗೆ ಕಿವಿಮಾತು ಹೇಳಿದ ನೆತನ್ಯಾಹು, "ನಾನು ನಮ್ಮ ವೀರ ಸೈನಿಕರೊಂದಿಗೆ ಗಾಜಾ ಪಟ್ಟಿಯಲ್ಲಿದ್ದೇವೆ. ನಮ್ಮ ಒತ್ತೆಯಾಳುಗಳನ್ನು ಹಿಂದಿರುಗಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅವರೆಲ್ಲರನ್ನೂ ವಾಪಸ್ ತವರಿಗೆ ಕರೆತರುತ್ತೇವೆ. ಈ ಯುದ್ಧದಲ್ಲಿ ನಮಗೆ ಮೂರು ಗುರಿಗಳಿವೆ, ಮೊದಲನೇಯದು ಹಮಾಸ್ ಅನ್ನು ತೊಡೆದುಹಾಕುವುದು, ಎರಡನೇಯದು ನಮ್ಮ ಎಲ್ಲಾ ಒತ್ತೆಯಾಳುಗಳನ್ನು ವಾಪಸ್ ಹಿಂತಿರುಗಿಸುವುದು ಮತ್ತು ಕೊನೆಯದಾಗಿ ಗಾಜಾವು ಇಸ್ರೇಲ್ ರಾಜ್ಯಕ್ಕೆ ಬೆದರಿಕೆ ಹಾಕದಿರುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದರು.
ಇದನ್ನೂ ಓದಿ:ಇಸ್ರೇಲ್ ಪರ ಗೂಢಚಾರಿಕೆ ಆರೋಪ ; ವೆಸ್ಟ್ಬ್ಯಾಂಕ್ನಲ್ಲಿ ಇಬ್ಬರು ಶಂಕಿತರ ಕೊಲೆ