ಕಠ್ಮಂಡು(ನೇಪಾಳ):ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ, ನಾಲ್ವರು ಅನುಯಾಯಿಗಳ ನಾಪತ್ತೆ ಆರೋಪ ಪ್ರಕರಣದಲ್ಲಿ ಬುದ್ಧ ಬಾಯ್, ಬುದ್ಧನ ಪುನರ್ಜನ್ಮ ಎಂದು ಪೂಜಿಸಲ್ಪಡುವ ನೇಪಾಳದ ವಿವಾದಿತ ಆಧ್ಯಾತ್ಮಿಕ ಧರ್ಮಗುರು ರಾಮ್ ಬಹದ್ದೂರ್ ಬಮ್ಜಾನ್ರನ್ನು ಪೊಲೀಸರು ಬಂಧಿಸಿದ್ದಾರೆ.
ರಾಮ್ ಬಹದ್ದೂರ್ ಬಮ್ಜಾನ್ರನ್ನು ಬುದ್ಧನ ಪುನರ್ಜನ್ಮ ಎಂದೇ ಭಾವಿಸಲಾಗುತ್ತದೆ. ಭೌದ್ಧಧರ್ಮದ ಪ್ರಚಾರ ನಡೆಸುವ ಅವರು ತಿಂಗಳುಗಟ್ಟಲೆ ಊಟ, ನೀರಿಲ್ಲದೇ ತಪಸ್ಸು ನಡೆಸಿದ್ದಾರೆ ಎಂದು ಇಲ್ಲಿನ ಜನರು ಹೇಳುತ್ತಾರೆ. ಆದರೆ, ಬೌದ್ಧ ಗುರುಗಳೇ ಈ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ.
ರಾಜಧಾನಿ ಕಠ್ಮಂಡುವಿನಲ್ಲಿರುವ ನಿವಾಸದಲ್ಲಿ ಮಂಗಳವಾರ ತಡರಾತ್ರಿ ಬಮ್ಜಾನ್ ಅವರನ್ನು ಬಂಧಿಸಲಾಯಿತು. ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದ ತಕ್ಷಣ ಅವರು ಕಿಟಕಿಯಿಂದ ಹಾರಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆದರೆ, ಅವರನ್ನು ಪೊಲೀಸರು ಬೆನ್ನಟ್ಟಿ ಹಿಡಿದರು. ಬಳಿಕ ಅವರಿಗೆ ಕೈಕೋಳ ಹಾಕಿ, ಮನೆಯ ಬಾಲ್ಕನಿಯ ಮೇಲಿಂದ ಮಾಧ್ಯಮದ ಮುಂದೆ ಪ್ರದರ್ಶಿಸಲಾಯಿತು. ಇದೇ ವೇಳೆ ಮನೆಯಿಂದ 227,000 ಡಾಲರ್ ವಿದೇಶಿ ಕರೆನ್ಸಿ, 23,000 ನೇಪಾಳಿ ಕರೆನ್ಸಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಾದಿತ ಧರ್ಮಗುರುವನ್ನು ದಕ್ಷಿಣ ನೇಪಾಳದ ಕೋರ್ಟ್ನಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಬಮ್ಜಾನ್ರನ್ನು ಬಂಧಿಸಿ ಕಠ್ಮಂಡುವಿನ ಕೇಂದ್ರೀಯ ತನಿಖಾ ದಳ ಕಚೇರಿಗೆ ಕರೆದೊಯ್ಯಲಾಯಿತು. ಈ ವೇಳೆ ಅವರ ಅನುಯಾಯಿಗಳು ಹೊರಗೆ ಜಮಾಯಿಸಿದರು. ಬಂಧನದ ಖಂಡಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಎಲ್ಲ ಅನುಯಾಯಿಗಳನ್ನು ಅಲ್ಲಿಂದ ತೆರವು ಮಾಡಿಸಿದ್ದಾರೆ.