ಕಠ್ಮಂಡು: ನೇಪಾಳದ ಪ್ರಖ್ಯಾತ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ ಅವರು 28ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 27 ನೇ ಬಾರಿಗೆ ಏರಿದೆ ಕೇವಲ ಒಂದು ವಾರದ ನಂತರ ಮಂಗಳವಾರ ಮತ್ತೆ ಏರಿ ದಾಖಲೆ ಬರೆದಿದ್ದಾರೆ. 53 ವರ್ಷದ ಅವರು 848.86 ಮೀಟರ್ ಎತ್ತರದ ಶಿಖರವನ್ನು 9.23 ಗಂಟೆಗೆ ತಲುಪಿದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
"ಕಾಮಿ ರೀಟಾ ಶೆರ್ಪಾ ಮಂಗಳವಾರ 28 ನೇ ಬಾರಿಗೆ ಮೌಂಟ್ ಎವರೆಸ್ಟ್ ಅನ್ನು ಏರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ" ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆಯ ಪರ್ವತಾರೋಹಣ ವಿಭಾಗದ ಅಧಿಕಾರಿ ಬಿಗ್ಯಾನ್ ಕೊಯಿರಾಲಾ ಖಚಿತ ಪಡಿಸಿದ್ದಾರೆ. "ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಅವರು ಪ್ರಸ್ತುತ ಕೆಳಗಿನ ಶಿಬಿರಗಳಿಗೆ ಇಳಿಯುತ್ತಿದ್ದಾರೆ" ಎಂದು ಕಾಮಿಯೊಂದಿಗೆ ಸಂಪರ್ಕ ಹೊಂದಿರುವ ಏಜೆನ್ಸಿಯಾದ ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಅಧ್ಯಕ್ಷ ಮಿಗ್ಮಾ ಶೆರ್ಪಾ ತಿಳಿಸಿದ್ದಾರೆ.
ಮೇ 17 ರಂದು ಕಾಮಿ 27 ನೇ ಬಾರಿಗೆ ಪರ್ವತವನ್ನು ಏರಿದ್ದರು. ಇನ್ನೊಬ್ಬ ನೇಪಾಳಿ ಮಾರ್ಗದರ್ಶಕ ಪಸಾಂಗ್ ದಾವಾ ಶೆರ್ಪಾ ಕೂಡ ಸೋಮವಾರ 27 ನೇ ಬಾರಿಗೆ ಶಿಖರವನ್ನು ತಲುಪಿದರು. ಕಾಮಿ ರೀಟಾ ಅವರು ಮೇ 13, 1994 ರಂದು ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಅನ್ನು ಏರಿದ್ದರು. ಎವರೆಸ್ಟ್ ಜೊತೆಗೆ ಅವರು K2 ಮತ್ತು ಲೋಹಟ್ಸೆ (Lhotse) (ತಲಾ ಒಂದು ಬಾರಿ), ಮನಸ್ಲು (ಮೂರು ಬಾರಿ) ಮತ್ತು ಚೋ ಓಯು (ಎಂಟು) ಶಿಖರಗಳನ್ನು ಕೂಡ ಏರಿದ್ದಾರೆ. ಅವರು 8,000 ಮೀ ಗಿಂತ ಹೆಚ್ಚು ಏರಿದ ದಾಖಲೆಯನ್ನು ಹೊಂದಿದ್ದಾರೆ.