ಕಠ್ಮಂಡು (ನೇಪಾಳ) :ವಿಜಯ ದಶಮಿ ಮತ್ತು ದೀಪಾವಳಿ ಸೇರಿದಂತೆ ಹಬ್ಬಗಳ ಸೀಸನ್ ಆರಂಭವಾಗುವ ಮುನ್ನ ನೇಪಾಳ ಸರ್ಕಾರವು ಭಾರತದಿಂದ 20,000 ಮೆಟ್ರಿಕ್ ಟನ್ (ಎಂಟಿ) ಸಕ್ಕರೆ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ದೇಶದಲ್ಲಿನ ಸ್ಥಳೀಯ ಬೇಡಿಕೆ ಪೂರೈಸಲು 60,000 ಮೆಟ್ರಿಕ್ ಟನ್ ಸಕ್ಕರೆ ಆಮದಿಗೆ ಕಸ್ಟಮ್ಸ್ ವಿನಾಯಿತಿ ನೀಡುವಂತೆ ನೇಪಾಳದ ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ಕೇಳಿತ್ತು. ಆದರೆ ,ಸದ್ಯಕ್ಕೆ ಹಣಕಾಸು ಸಚಿವಾಲಯವು 20,000 ಮೆಟ್ರಿಕ್ ಟನ್ ಸಕ್ಕರೆ ಆಮದಿಗೆ ಮಾತ್ರ ಅನುಮತಿ ನೀಡಿದೆ.
ಹಣಕಾಸು ಸಚಿವಾಲಯದ ವಕ್ತಾರ ಧನಿರಾಮ್ ಶರ್ಮಾ ಅವರ ಪ್ರಕಾರ, ಸಚಿವಾಲಯವು ಕಸ್ಟಮ್ಸ್ ಸುಂಕದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿದೆ, ಅಂದರೆ ಈ ಹಿಂದೆ ವಿಧಿಸಲಾದ ಶೇಕಡಾ 30 ರಷ್ಟು ಕಸ್ಟಮ್ಸ್ ಸುಂಕಕ್ಕಿಂತ ಶೇಕಡಾ 15 ರಷ್ಟು ಕಡಿಮೆಯಾಗಿದೆ. ಸಾಲ್ಟ್ ಟ್ರೇಡಿಂಗ್ ಕಾರ್ಪೊರೇಷನ್ (ಎಸ್ಟಿಸಿ) ಮತ್ತು ಫುಡ್ ಮ್ಯಾನೇಜಮೆಂಟ್ ಅಂಡ್ ಟ್ರೇಡಿಂಗ್ ಕಂಪನಿ ಎಂಬ ಎರಡು ಕಂಪನಿಗಳು ಮುಂಬರುವ ಹಬ್ಬದ ಋತುವಿನಲ್ಲಿ ತಲಾ 10,000 ಮೆಟ್ರಿಕ್ ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳಲಿವೆ ಎಂದು ಶರ್ಮಾ ಹೇಳಿದ್ದಾರೆ.
50,000 ಮೆಟ್ರಿಕ್ ಟನ್ ಸಕ್ಕರೆ ಆಮದಿಗೆ ಸರ್ಕಾರದ ಅನುಮತಿ ಕೇಳಲಾಗಿತ್ತು ಎಂದು ಎಸ್ಟಿಸಿಯ ವಿಭಾಗೀಯ ವ್ಯವಸ್ಥಾಪಕ ಬ್ರಜೇಶ್ ಝಾ ಅವರು ಹೇಳಿದರು. ಝಾ ಅವರ ಪ್ರಕಾರ, ನೇಪಾಳದ ದೇಶೀಯ ಸಕ್ಕರೆ ಬೇಡಿಕೆ 3,00,000 ಮೆಟ್ರಿಕ್ ಟನ್ ಆಗಿದ್ದು, ಈ ಬೇಡಿಕೆಯನ್ನು ಪೂರೈಸಲು ಮುಖ್ಯವಾಗಿ ಭಾರತದಿಂದ ದೊಡ್ಡ ಪ್ರಮಾಣದ ಸಕ್ಕರೆ ಆಮದು ಮಾಡಿಕೊಳ್ಳಬೇಕಿದೆ.