ಕಾಠ್ಮಂಡು (ನೇಪಾಳ) : ಸ್ಪೀಕರ್ ತನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆಕ್ರೋಶಗೊಂಡ ನೇಪಾಳ ಸಂಸದರೊಬ್ಬರು ಸದನದಲ್ಲೇ ತಾವು ಧರಿಸಿದ್ದ ಶರ್ಟ್ ಕಳಚಿ ಪ್ರತಿಭಟನೆ ನಡೆಸಿದ್ದಾರೆ. ಸೋಮವಾರ ನಡೆದ ಕಲಾಪದಲ್ಲಿ ಸಂಸದ ಅಮರೇಶ್ ಕುಮಾರ್ ಸಿಂಗ್ ಪ್ರತಿಭಟಿಸಿದರು. ಅಮರೇಶ್ ನೇಪಾಳಿ ಕಾಂಗ್ರೆಸ್‌ನ ಮಾಜಿ ನಾಯಕ. ಕಳೆದ ವರ್ಷ ನಡೆದ ಸಂಸತ್ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದ ಕಾರಣಕ್ಕೆ ಸರ್ಲಾಹಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು.
ಭಾರತದ ರಾಜಧಾನಿ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆದ ಸಿಂಗ್, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಸ್ಪೀಕರ್ ದೇವರಾಜ್ ಘಿಮಿರೆ ಅವರು ತನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಸಿಡಿಮಿಡಿಗೊಂಡರು. ಇದೇ ವೇಳೆ ತಮ್ಮ ಬಟ್ಟೆಗಳನ್ನು ಕಳಚಿ ಪ್ರತಿಭಟಿಸಿದರು. ಸಭೆಯಲ್ಲಿ ಸೌಜನ್ಯಯುತವಾಗಿ ನಡೆದುಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ, ಭ್ರಷ್ಟಚಾರದ ವಿರುದ್ಧ ನಾನು ಮಾತನಾಡುತ್ತೇನೆ. ಇದಕ್ಕಾಗಿ ಪ್ರಾಣ ಕೊಡಲೂ ಸಿದ್ದ ಎಂದು ಹೇಳಿದರು.