ಕಠ್ಮಂಡು (ನೇಪಾಳ): ಏರ್ ಇಂಡಿಯಾ ಮತ್ತು ನೇಪಾಳ ಏರ್‌ಲೈನ್ಸ್‌ಗೇ ಸೇರಿದ ವಿಮಾನಗಳ ನಡುವಿನ ಸಂಭಾವ್ಯ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ವರದಿಯಾಗಿದೆ. ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸುವ ಸಾಧ್ಯತೆ ಇತ್ತು. ವಿಮಾನದ ಎಚ್ಚರಿಕೆ ವ್ಯವಸ್ಥೆಯು ಪೈಲಟ್‌ಗಳಿಗೆ ಅಪಾಯದ ಸೂಚನೆಯನ್ನು ನೀಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಘಟನೆ ಸಂಬಂಧ ಏರ್ ಇಂಡಿಯಾ ಪೈಲಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನೇಪಾಳ ಸರ್ಕಾರ ಭಾರತೀಯ ಅಧಿಕಾರಿಗಳನ್ನು ಆಗ್ರಹಿಸಿದೆ.
ಆಗಿದ್ದೇನು?: ವರದಿಗಳ ಪ್ರಕಾರ, ಮಲೇಷ್ಯಾದ ಕೌಲಲಾಂಪುರದಿಂದ ಕಠ್ಮಂಡುಗೆ ತೆರಳುತ್ತಿದ್ದ ನೇಪಾಳ ಏರ್‌ಲೈನ್ಸ್ ವಿಮಾನ ಹಾಗೂ ದೆಹಲಿಯಿಂದ ಕಠ್ಮಂಡುಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಶುಕ್ರವಾರ ಪರಸ್ಪರ ಡಿಕ್ಕಿ ಹೊಡೆಯುವಷ್ಟು ಸಮೀಪದಲ್ಲೇ ಹಾರಾಟ ನಡೆಸಿವೆ ಎಂದು ತಿಳಿದು ಬಂದಿದೆ. ಏರ್ ಇಂಡಿಯಾ ವಿಮಾನ ಭೂಮಿಯಿಂದ 19 ಸಾವಿರ ಅಡಿ ಎತ್ತರದಿಂದ ಕೆಳಗಿಳಿಯುತ್ತಿದ್ದರೆ, ನೇಪಾಳ ಏರ್‌ಲೈನ್ಸ್ ವಿಮಾನ ಅದೇ ಸ್ಥಳದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. 2 ವಿಮಾನಗಳು ಅತ್ಯಂತ ಸಮೀಪದಲ್ಲಿದೆ ಎಂದು ರಾಡಾರ್‌ನಲ್ಲಿ ತೋರಿಸಿದ್ದರಿಂದ ನೇಪಾಳ ಏರ್‌ಲೈನ್ಸ್ ವಿಮಾನ 7 ಸಾವಿರ ಅಡಿಗಳಿಗೆ ಕೆಳಗಿಳಿಸಿ ಅಪಘಾತ ತಪ್ಪಿಸಿದ್ದರು ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ವಕ್ತಾರರು ತಿಳಿಸಿದ್ದಾರೆ.
ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಅನುಮತಿ ಇಲ್ಲದೆ ಶುಕ್ರವಾರ ತಮ್ಮ ವಿಮಾನವನ್ನು 15 ಸಾವಿರ ಅಡಿಗಳಿಗೆ ಇಳಿಸಿದ ನಂತರ ನೇಪಾಳದ ವಾಯುಯಾನ ಪ್ರಾಧಿಕಾರ ಏರ್ ಇಂಡಿಯಾ ವಿಮಾನಗಳನ್ನು ನೇಪಾಳ ವಾಯುಪ್ರದೇಶದಲ್ಲಿ ಹಾರಿಸುವುದನ್ನು ನಿಷೇಧಿಸಿದೆ.
ಇದನ್ನೂ ಓದಿ:ನೇಪಾಳ ವಿಮಾನ ಪತನ: ಐವರು ಭಾರತೀಯರು ಸೇರಿ 72 ಪ್ರಯಾಣಿಕರ ಸಾವು