ಕರಾಚಿ:ಪಾಕಿಸ್ತಾನದಲ್ಲಿ ಹಿಂದು ಸಮುದಾಯ ಮತ್ತು ದೇವಾಲಯಗಳ ಮೇಲಿನ ದಾಳಿ ಮುಂದುವರಿದಿದೆ. ಸಿಂಧ್ ಪ್ರಾಂತ್ಯದ ಪ್ರಾಂತೀಯ ರಾಜಧಾನಿ ಕರಾಚಿಯಲ್ಲಿ ಸುಮಾರು 150 ವರ್ಷಗಳ ಹಳೆಯದಾದ ಹಿಂದೂ ದೇವಾಲಯವನ್ನು ಹಳೆಯ ಮತ್ತು ಅಪಾಯಕಾರಿ ಕಟ್ಟಡವೆಂದು ಘೋಷಿಸಿ ನೆಲಸಮಗೊಳಿಸಲಾಗಿದೆ. ಇದು ಹಿಂದೂ ಸಮುದಾಯಕ್ಕೆ ಆಘಾತ ಉಂಟು ಮಾಡಿದೆ.
ಕರಾಚಿಯ ಸೋಲ್ಜರ್ ಬಜಾರ್‌ನಲ್ಲಿರುವ ಮಾರಿ ಮಾತಾ ದೇವಾಲಯವನ್ನು 2 ದಿನಗಳ ಹಿಂದೆ ರಾತ್ರೋರಾತ್ರಿ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಬುಲ್ಡೋಜರ್‌ಗಳಿಂದ ಒಡೆದು ಹಾಕಲಾಗಿದೆ. ದೇಗುಲ ಕೆಡವುವ ಬಗ್ಗೆ ಪೂರ್ವ ಮಾಹಿತಿಯನ್ನೂ ನೀಡದೇ ಕ್ರಮ ಕೈಗೊಂಡಿರುವುದು ಹಿಂದುಗಳ ಅಸಮಾಧಾನಕ್ಕೆ ಕಾರಣವಾಗಿದೆ.
ರಾತ್ರೋರಾತ್ರಿ ಬುಲ್ಡೋಜರ್ಗಳ ಸಮೇತ ಬಂದ ಅಧಿಕಾರಿಗಳು ದೇಗುಲದ ಒಳಭಾಗವನ್ನು ಮೊದಲು ಕೆಡವಿದರು. ಹೊರ ಗೋಡೆ ಮತ್ತು ಮುಖ್ಯ ದ್ವಾರವನ್ನು ಹಾಗೆಯೇ ಬಿಡಲಾಗಿದೆ. ಗರ್ಭಗುಡಿಯನ್ನೇ ಮೊದಲು ನಾಶ ಮಾಡಿದರು. ಈ ಕುರಿತು ಯಾವ ಮಾಹಿತಿಯನ್ನೂ ನೀಡಿರಲಿಲ್ಲ ಎಂದು ಪಂಚಮುಖಿ ಹನುಮಾನ್ ಮಂದಿರದ ಅರ್ಚಕರಾದ ರಾಮ್ನಾಥ್ ಮಿಶ್ರಾ ಎಂಬುವರು ಆಕ್ಷೇಪ ವ್ಯಕ್ತಪಡಿಸಿದರು. ಈ ದೇವಾಲಯವನ್ನು ಸುಮಾರು 150 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಇದರಡಿ ಕೆಳಗೆ ನಿಧಿ ಇದೆ ಎಂಬ ಕಟ್ಟುಕಥೆಗಳಿಂದಾಗಿ ದೇಗುಲವನ್ನು ನೆಲಸಮ ಮಾಡಲಾಗಿದೆ ಎಂದು ದೂರಿದರು.
400 ರಿಂದ 500 ಚದರ್ ಗಜಗಳಷ್ಟು ವಿಸ್ತೀರ್ಣ ಹೊಂದಿರುವ ದೇವಾಲಯ ಇತ್ತೀಚೆಗೆ ಭೂಗಳ್ಳರ ಹಪಾಹಪಿಗೆ ತುತ್ತಾಗಿದೆ. ದೇವಾಲಯ ಅಪಾಯಕಾರಿ ರಚನೆಯಿಂದ ಕೂಡಿದೆ. ಇದನ್ನು ಕೆಡವಬೇಕು ಎಂದು ಅಧಿಕಾರಿಗಳು ಬೇಕಂತಲೇ ಘೋಷಣೆ ಮಾಡಿದ್ದರು ಎಂಬ ಆಪಾದನೆ ಕೇಳಿಬಂದಿದೆ.