ಇಸ್ತಾಂಬುಲ್ (ಟರ್ಕಿ):ಭೂಕಂಪನದಿಂದ ನಲುಗಿರುವ ಟರ್ಕಿ, ಸಿರಿಯಾ ದೇಶಕ್ಕೆ ಭಾರತ ಸರ್ಕಾರ ಸಹಾಯಹಸ್ತ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(ಎನ್ಡಿಆರ್ಎಫ್) ನೂರಕ್ಕೂ ಅಧಿಕ ಸಿಬ್ಬಂದಿಯನ್ನು ಅಲ್ಲಿಗೆ ಕಳುಹಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ಬದುಕಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗಿದೆ. ಇದೇ ವೇಳೆ ಭಾರತೀಯ ಪಡೆಯ ಸಿಬ್ಬಂದಿಗೆ ಟರ್ಕಿ ಮಹಿಳೆಯೊಬ್ಬರು ಮುತ್ತಿಟ್ಟು ಧನ್ಯವಾದ ಹೇಳಿದ್ದಾರೆ.
ಚೀನಾ, ಪಾಕಿಸ್ತಾನದ ಬಳಿಕ ಭಾರತದ ಮೇಲೆ ಅತಿಹೆಚ್ಚು ದ್ವೇಷ ಹೊಂದಿರುವ ಟರ್ಕಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾನವೀಯ ನೆಲೆಯ ಮೇಲೆ ನೆರವು ನೀಡಿದ್ದಾರೆ. ಎನ್ಡಿಆರ್ಎಫ್, ವೈದ್ಯ, ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಎನ್ಡಿಆರ್ಎಫ್ ಸಿಬ್ಬಂದಿ ಮಹಿಳೆ, ಮಗುವನ್ನು ಅವಶೇಷಗಳಡಿಯಿಂದ ಜೀವಂತವಾಗಿ ಹೊರತೆಗೆದು ರಕ್ಷಿಸಿದೆ. ಇದಲ್ಲದೇ 8 ಶವಗಳನ್ನೂ ಪತ್ತೆ ಮಾಡಿದೆ. ಎನ್ಡಿಆರ್ಎಫ್ ಮಗುವನ್ನು ರಕ್ಷಿಸಿದ ವಿಡಿಯೋವನ್ನು ಗೃಹ ಸಚಿವ ಅಮಿತ್ ಶಾ ಅವರು ಹಂಚಿಕೊಂಡಿದ್ದಾರೆ. "ನಮ್ಮ ಹೆಮ್ಮೆಯ ಎನ್ಡಿಆರ್ಎಫ್. ರಕ್ಷಣಾ ಕಾರ್ಯಾಚರಣೆಯಲ್ಲಿ ಇಂಡಿಯಾ 11 ತಂಡ ಆರು ವರ್ಷದ ಬಾಲಕಿಯನ್ನು ಬೆರೆನ್ ಪ್ರದೇಶದಲ್ಲಿ ಅವಶೇಷಗಳಡಿಯಿಂದ ಜೀವಂತವಾಗಿ ರಕ್ಷಿಸಿದೆ. ಟರ್ಕಿಗೆ ಸಹಾಯ ಮಾಡಲು ನಾವು ಬದ್ಧವಾಗಿದೆ" ಎಂದು ಒಕ್ಕಣೆ ನೀಡಿದ್ದಾರೆ.
ಟರ್ಕಿ ಮಹಿಳೆ ಮುತ್ತಿಟ್ಟ ಚಿತ್ರ ವೈರಲ್:ಇನ್ನೊಂದೆಡೆ, ಟರ್ಕಿಯ ಮಹಿಳೆಯೊಬ್ಬರು ರಕ್ಷಣಾ ಕಾರ್ಯದಲ್ಲಿರುವ ಭಾರತೀಯ ಪಡೆಯ ಸಿಬ್ಬಂದಿಗೆ ಮುತ್ತಿಟ್ಟಿದ್ದನ್ನು ಭಾರತೀಯ ಸೇನೆಯ ಅಡಿಷನಲ್ ಡೈರೆಕ್ಟರೇಟ್ ಜನರಲ್ ಆಫ್ ಪಬ್ಲಿಕ್ ಇನ್ಫಾರ್ಮೇಶನ್ (ADG PI) ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ. "ನಾವು ಕಾಳಜಿ ವಹಿಸುತ್ತೇವೆ" ಎಂದು ಬರೆಯಲಾಗಿದೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.