ಲಂಡನ್ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಅಕ್ಟೋಬರ್ 21 ರಂದು ದುಬೈನಿಂದ ಚಾರ್ಟರ್ಡ್ ವಿಮಾನದಲ್ಲಿ ಪಾಕಿಸ್ತಾನವನ್ನು ತಲುಪಲಿದ್ದು, ಯುಕೆಯಲ್ಲಿನ ನಾಲ್ಕು ವರ್ಷಗಳ ಸ್ವಯಂ ಘೋಷಿತ ದೇಶಭ್ರಷ್ಟತೆಯನ್ನು ಕೊನೆಗೊಳಿಸಲಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. "ಉಮೀದ್-ಎ-ಪಾಕಿಸ್ತಾನ್" ಎಂಬ ಹೆಸರನ್ನು ಹೊಂದಿರುವ ಚಾರ್ಟರ್ಡ್ ವಿಮಾನದಲ್ಲಿ ಷರೀಫ್ ತವರಿಗೆ ಮರಳಲಿದ್ದಾರೆ. ಉಮೀದ್-ಎ-ಪಾಕಿಸ್ತಾನ ಅಂದರೆ ಪಾಕಿಸ್ತಾನದ ಭರವಸೆಯ ಕಿರಣ ಎಂದರ್ಥ
ಈಗಾಗಲೇ ವಿಮಾನವನ್ನು ಬುಕ್ ಮಾಡಲಾಗಿದೆ ಮತ್ತು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ವರದಿ ತಿಳಿಸಿದೆ. ಮೂರು ಬಾರಿ ಪ್ರಧಾನಿಯಾಗಿದ್ದ 73 ವರ್ಷದ ನವಾಜ್ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷವನ್ನು ಮುನ್ನಡೆಸುವ ನಿರೀಕ್ಷೆಯಿದೆ.
ಪಕ್ಷದ ಸದಸ್ಯರು ಮತ್ತು ಪತ್ರಕರ್ತರೊಂದಿಗೆ ಷರೀಫ್ ಅಕ್ಟೋಬರ್ 21 ರಂದು ದುಬೈನಿಂದ ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಲಾಹೋರ್ಗೆ ತೆರಳುವ ಮೊದಲು ವಿಶೇಷ ವಿಮಾನವು ದುಬೈನಿಂದ ಹೊರಟು ಇಸ್ಲಾಮಾಬಾದ್ನಲ್ಲಿ ಇಳಿಯಲಿದ್ದು, ನವಾಜ್ ಷರೀಫ್ ಮಿನಾರ್-ಇ-ಪಾಕಿಸ್ತಾನದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಏತನ್ಮಧ್ಯೆ ನವಾಜ್ ಷರೀಫ್ ಬುಧವಾರ ಉಮ್ರಾಗಾಗಿ ಸೌದಿ ಅರೇಬಿಯಾ ತಲುಪಲಿದ್ದಾರೆ. ಒಂದು ವಾರ ಸೌದಿ ಅರೇಬಿಯಾದಲ್ಲಿಯೇ ಉಳಿಯಲಿದ್ದು, ಈ ಸಮಯದಲ್ಲಿ ಅವರು ಪ್ರಮುಖ ಸಭೆಗಳನ್ನು ನಡೆಸಲಿದ್ದಾರೆ. ನಂತರ ಅಕ್ಟೋಬರ್ 18 ರಂದು ಅವರು ದುಬೈಗೆ ಆಗಮಿಸಲಿದ್ದಾರೆ.
ನವಾಜ್ ಷರೀಫ್ ಅವರೊಂದಿಗೆ ಅವರ ಆಪ್ತರಾದ ಮಿಯಾಂ ನಾಸಿರ್ ಜಂಜುವಾ, ವಕಾರ್ ಅಹ್ಮದ್, ಅವರ ಸ್ನೇಹಿತ ಕರೀಮ್ ಯೂಸುಫ್ ಮತ್ತು ಇತರರು ಸೌದಿ ಭೇಟಿಗೆ ತೆರಳಲಿದ್ದಾರೆ. ಮಿಡ್ಜಾಕ್ (MIDJAC) ಕಂಪನಿಯ ಮಾಲೀಕ ನಾಸಿರ್ ಜಂಜುವಾ ಅವರು ಷರೀಫ್ ಅವರೊಂದಿಗೆ ಲಂಡನ್ನಲ್ಲಿ ಸುಮಾರು ಮೂರು ವರ್ಷಗಳ ಕಾಲ ದೇಶಭ್ರಷ್ಟರಾಗಿ ವಾಸಿಸುತ್ತಿದ್ದರು ಮತ್ತು ಕೆಲ ತಿಂಗಳ ಹಿಂದೆ ಪಾಕಿಸ್ತಾನಕ್ಕೆ ಮರಳಿದ್ದಾರೆ.
ನವಾಜ್ ಷರೀಫ್ ಅವರು 2017ರಲ್ಲಿ ದೇಶದ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು. ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್ ನಾಲ್ಕು ವಾರಗಳ ಅನುಮತಿ ನೀಡಿದ ನಂತರ ದೇಶದಿಂದ ಹೊರ ಹೋದ ಅವರು ದೇಶಭ್ರಷ್ಟರಾಗಿ 2019 ರಿಂದ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಅಲ್-ಅಜೀಜಿಯಾ ಮಿಲ್ಸ್ ಪ್ರಕರಣದಲ್ಲಿ ಲಾಹೋರ್ನ ಕೋಟ್ ಲಖ್ಪತ್ ಜೈಲಿನಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಅವರಿಗೆ 2019 ರಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಲಂಡನ್ ಗೆ ತೆರಳಲು ಅನುಮತಿ ನೀಡಲಾಗಿತ್ತು.
ಇದನ್ನೂ ಓದಿ : ಸಿರಿವಂತರ ಪಟ್ಟಿ: ಅಗ್ರಸ್ಥಾನದಲ್ಲಿ ಅಂಬಾನಿ, 2ನೇ ಸ್ಥಾನದಲ್ಲಿ ಅದಾನಿ; ರತನ್ ಟಾಟಾಗೆ 12.6 ಮಿಲಿಯನ್ X ಫಾಲೋವರ್ಸ್