ನ್ಯಾಶ್‌ವಿಲ್ಲೆ (ಯುಎಸ್ಎ): ಇಲ್ಲಿನ ಖಾಸಗಿ ಕ್ರಿಶ್ಚಿಯನ್ ಶಾಲೆಗೆ ನುಗ್ಗಿದ ಯುವತಿಯೊಬ್ಬಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾಳೆ. ಸೋಮವಾರ ಎರಡು ರೈಫಲ್ ಹಾಗೂ ಒಂದು ಪಿಸ್ತೂಲಿನೊಂದಿಗೆ ಬಂದಿದ್ದ ಆಕೆ ಮೂವರು ವಿದ್ಯಾರ್ಥಿಗಳು ಮತ್ತು ಮೂವರು ವಯಸ್ಕರನ್ನು ಹತ್ಯೆ ಮಾಡಿದ್ದಾಳೆ ಎಂದು ಮೆಟ್ರೋಪಾಲಿಟನ್ ನ್ಯಾಶ್‌ವಿಲ್ಲೆ ಪೊಲೀಸ್ ಇಲಾಖೆ ತಿಳಿಸಿದೆ. ಶಾಲೆಗಳಲ್ಲಿ ನಡೆಯುವ ಭೀಕರ ರಕ್ತಪಾತ ಘಟನೆಗಳಿಂದ ಹೆಚ್ಚು ಆತಂಕಕ್ಕೊಳಗಾಗುತ್ತಿರುವ ಅಮೆರಿಕದಲ್ಲಿ ಇದು ಇತ್ತೀಚಿನ ಸಾಮೂಹಿಕ ಗುಂಡಿನ ದಾಳಿಯಾಗಿದೆ.
ಪ್ರಿಸ್ಕೂಲ್‌ನಿಂದ 6ನೇ ತರಗತಿಯವರೆಗೆ ಸುಮಾರು 200 ವಿದ್ಯಾರ್ಥಿಗಳಿದ್ದ ಪ್ರೆಸ್‌ಬಿಟೇರಿಯನ್ ಕವೆನೆಂಟ್ ಸ್ಕೂಲ್‌ನಲ್ಲಿ ಈ ಹಿಂಸಾಚಾರ ನಡೆದಿದೆ. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಸಹ ಗುಂಡು ಹಾರಿಸಿದ್ದು ಹಂತಕಿ ಸಾವನ್ನಪ್ಪಿದ್ದಾಳೆ. ಶೂಟರ್ ನ್ಯಾಶ್‌ವಿಲ್ಲೆಯ 28 ವರ್ಷದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಗೂ ಶಾಲೆಗೂ ಇರುವ ಸಂಬಂಧದ ಕುರಿತು ತನಿಖೆ ನಡೆಯುತ್ತಿದೆ.
ಕಳೆದ ವರ್ಷ ಟೆಕ್ಸಾಸ್‌ನ ಉವಾಲ್ಡೆಯಲ್ಲಿನ ಪ್ರಾಥಮಿಕ ಶಾಲೆಯಲ್ಲಿ ನಡೆದ ಹತ್ಯಾಕಾಂಡ ಸೇರಿದಂತೆ ಶಾಲಾ ಹಿಂಸಾಚಾರದಿಂದ ವಿವಿಧ ಸಮುದಾಯಗಳು ತತ್ತರಿಸುತ್ತಿರುವಾಗ ಇಂತಹ ಹತ್ಯೆಗಳು ಮರುಕಳಿಸುತ್ತಿವೆ. ವರ್ಜೀನಿಯಾದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿ ಮೇಲೆ ಗುಂಡು ಹಾರಿಸಿದ್ದ. ಕಳೆದ ವಾರ ಡೆನ್ವಾರ್ನಲ್ಲಿ ನಡೆದ ಗುಂಡಿನ ದಾಳಿಯಿಂದ ಇಬ್ಬರು ಆಡಳಿತಾಧಿಕಾರಿಗಳು ಗಾಯಗೊಂಡಿದ್ದರು.
ಅಮೆರಿಕದಲ್ಲಿ ಹೆಚ್ಚುತ್ತಿರುವ ಗನ್ ಸಂಸ್ಕೃತಿ ಕುರಿತು ಅಧ್ಯಕ್ಷ ಜೋ ಬೈಡನ್ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದ್ದರು. "ನಾವು ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸಬೇಕಾಗಿದೆ. ನಿಷೇಧಿಸುವುದು ನಮಗೆ ಸಾಧ್ಯವಾಗದಿದ್ದರೆ, ಅವುಗಳನ್ನು ಖರೀದಿಸಲು ಇರುವ ವಯೋಮಿತಿಯನ್ನು 18 ರಿಂದ 21ಕ್ಕೆ ಹೆಚ್ಚಿಸಬೇಕು. ಹೆಚ್ಚಿನ ಸಾಮರ್ಥ್ಯದ ಮ್ಯಾಗಜಿನ್‌ಗಳನ್ನು ನಿಷೇಧಿಸಬೇಕು" ಎಂದು ಅವರು ಅಭಿಪ್ರಾಯಪಟ್ಟಿದ್ದರು.
"ನಿಜವಾಗಿಯೂ ನನ್ನ ಬಳಿ ಪದಗಳಿಲ್ಲ. ಇದು ಹೃದಯವಿದ್ರಾವಕ. ನಾವೆಲ್ಲರೂ ಮಡಿದವರ ಪರವಾಗಿ ನಿಲ್ಲುತ್ತೇವೆ. ಬಂದೂಕು ನಿಯಂತ್ರಣ ಶಾಸನವನ್ನು ಜಾರಿಗೆ ತರಲು ಕಾಂಗ್ರೆಸ್‌ಗೆ ಒತ್ತಾಯಿಸಲಾಗುವುದು" ಎಂದು ಹೇಳಿದ್ದರು.
"ನ್ಯಾಶ್‌ವಿಲ್ಲೆ ಶಾಲೆಯ ಶೂಟಿಂಗ್ ಭಯಂಕರ ದುರಂತ" ಎಂದು ಮೇಯರ್ ಜಾನ್ ಕೂಪರ್ ಟ್ವೀಟ್ ಮಾಡಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಹೃದಯಶ್ಪರ್ಶಿ ಸಂತಾಪಗಳು. ನಮ್ಮ ಇಡೀ ನಗರವು ನಿಮ್ಮೊಂದಿಗೆ ನಿಂತಿದೆ" ಎಂದು ವಿಶ್ವಾಸ ತುಂಬಿದ್ದಾರೆ.
ಶಾಲೆಯ ವೆಬ್‌ಸೈಟ್‌ನ ಪ್ರಕಾರ, 2001ರಲ್ಲಿ ಕವೆನೆಂಟ್ ಪ್ರೆಸ್ಬಿಟೇರಿಯನ್ ಚರ್ಚ್‌ನ ಸಚಿವಾಲಯದ ಒಪ್ಪಂದದ ಅನುಸಾರ ಈ ಶಾಲೆಯನ್ನು ಸ್ಥಾಪಿಸಲಾಯಿತು. ನ್ಯಾಶ್‌ವಿಲ್ಲೆ ಡೌನ್‌ಟೌನ್‌ನ ದಕ್ಷಿಣಕ್ಕೆ ಶಾಲೆ ಇದೆ. ನಗರದ ಉನ್ನತ ವಿಶ್ವವಿದ್ಯಾನಿಲಯಗಳಿಗೆ ಸಮೀಪದಲ್ಲಿದ್ದು, ಪ್ರಸಿದ್ಧ ಬ್ಲೂಬರ್ಡ್ ಕೆಫೆಗೆ ನೆಲೆಯಾಗಿದೆ. ಸಂಗೀತಗಾರರು ಮತ್ತು ಹಾಡು ಬರೆಯುವವರಿಗೂ ಅಚ್ಚುಮೆಚ್ಚಿನ ಸ್ಥಳವೂ ಹೌದು. ಗ್ರೇಡ್ ಶಾಲೆಯಲ್ಲಿ 33 ಶಿಕ್ಷಕರಿದ್ದಾರೆ. ಎಂಪವರಿಂಗ್ ಮೈಂಡ್ಸ್, ಸೆಲೆಬ್ರೇಟಿಂಗ್ ಚೈಲ್ಡ್ವುಡ್ ಎಂಬುವುದು ಶಾಲೆಯ ಧ್ಯೇಯವಾಕ್ಯವಾಗಿದೆ.
ರಿಪಬ್ಲಿಕನ್ ಗವರ್ನರ್ ಬಿಲ್ ಲೀ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಗುಂಡಿನ ದಾಳಿಯನ್ನು "ಊಹಿಸಲಾಗದ ದುರಂತ" ಎಂದು ಕರೆದಿದ್ದಾರೆ. ಹಂತಕಿ ಪಕ್ಕದ ಬಾಗಿಲಿನ ಪ್ರವೇಶದ್ವಾರದ ಮೂಲಕ ಶಾಲಾ ಕಟ್ಟಡವನ್ನು ಪ್ರವೇಶಿಸಿದ್ದಾಳೆ. ಮನಸೋಇಚ್ಚೆ ಗುಂಡಿನ ದಾಳಿ ನಡೆಸಿ ಬಳಿಕ ಎರಡನೇ ಮಹಡಿಯಲ್ಲಿ ನ್ಯಾಶ್‌ವಿಲ್ಲೆ ಪೋಲೀಸರಿಂದ ಹತ್ಯೆಯಾಗಿದ್ದಾಳೆ ಎಂದು ನ್ಯಾಶ್‌ವಿಲ್ಲೆ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.
ಅಮೆರಿಕದ ಶೂಟೌಟ್ ಇತಿಹಾಸ:ನ್ಯಾಶ್‌ವಿಲ್ಲೆ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಸಾಮೂಹಿಕ ಹಿಂಸಾಚಾರದ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. 2020ರ ಕ್ರಿಸ್‌ಮಸ್ ದಿನದಂದು ಮ್ಯೂಸಿಕ್ ಸಿಟಿಯ ಐತಿಹಾಸಿಕ ಡೌನ್‌ಟೌನ್‌ನ ಹೃದಯಭಾಗದಲ್ಲಿ ಮನರಂಜನಾ ವಾಹನವನ್ನು ಉದ್ದೇಶ ಪೂರ್ವಕವಾಗಿ ಸ್ಫೋಟಿಸಲಾಗಿತ್ತು. 2018ರ ಏಪ್ರಿಲ್‌ನಲ್ಲಿ ನ್ಯಾಶ್‌ವಿಲ್ಲೆ ವಾಫಲ್ ಹೌಸ್‌ನಲ್ಲಿ ವ್ಯಕ್ತಿಯೊಬ್ಬ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದ. ಫೆಬ್ರವರಿ 2022ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಸೆಪ್ಟೆಂಬರ್ 2017 ರಲ್ಲಿ ಮುಸುಕುಧಾರಿ ಬಂದೂಕುಧಾರಿ ಬರ್ನೆಟ್ ಚಾಪೆಲ್ ಚರ್ಚ್ ಆಫ್ ಕ್ರೈಸ್ಟ್‌ನಲ್ಲಿ ಗುಂಡು ಹಾರಿಸಿದ್ದ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದರು. ಆತನಿಗೆ 2019ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅಂಗಡಿಗಳು, ಚಿತ್ರಮಂದಿರಗಳು, ಉದ್ಯೋಗ ಸ್ಥಳದಲ್ಲಿ ಶೂಟೌಟ್‌ನಿಂದ ಸಾವಿರಾರು ಜನರು ಮೃತಪಟ್ಟಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಅಮೆರಿಕದ ಶಾಲಾ ಕಾಲೇಜುಗಳಲ್ಲಿ ಸುಮಾರು 175 ಜನರು/ವಿದ್ಯಾರ್ಥಿಗಳು ಇಂಥ ಅಮಾನವೀಯ ಶೂಟೌಟ್‌ಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ:ಕ್ಯಾಲಿಫೋರ್ನಿಯಾದ ಗುರುದ್ವಾರದಲ್ಲಿ ಶೂಟೌಟ್: ಇಬ್ಬರಿಗೆ ಗಾಯ