ಸಿಯೋಲ್: ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೋ ಜಾಂಗ್, ಉತ್ತರ ಕೊರಿಯಾದ ಮೇಲೆ ಪೂರ್ವಭಾವಿ ದಾಳಿಯ ಬಗ್ಗೆ ಮಾತನಾಡಿರುವ ದಕ್ಷಿಣ ಕೊರಿಯಾದ ರಕ್ಷಣಾ ಸಚಿವರನ್ನು 'ಕಲ್ಮಶ ವ್ಯಕ್ತಿ' ಎಂದು ಕರೆದಿರುವುದು ಮಾತ್ರವಲ್ಲದೆ, ಸಿಯೋಲ್ಗೆ ಬೆದರಿಕೆ ಹಾಕಿದ್ದಾರೆ. ಉತ್ತರ ಕೊರಿಯಾ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಪರೀಕ್ಷೆ ನಡೆಸದಂತೆ ಹೇರಿದ್ದ ನಿಷೇಧವನ್ನು ಐಸಿಬಿಎಂ ತೆಗೆದು ಹಾಕಿದ್ದು, ಉತ್ತರ ಕೊರಿಯಾದ ಪರಮಾಣು ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಂಡು ದೇಶಗಳ ನಡುವೆ ಸಮನ್ವಯ ಸಾಧಿಸಲು ಶ್ರಮಿಸಿದ್ದ ದ.ಕೊರಿಯಾದ ಅಧ್ಯಕ್ಷ ಮೂನ್ ಜೆ ಇನ್ ಅವರಿಗೆ ಮುಜುಗರವನ್ನುಂಟು ಮಾಡಿದೆ.
ಶುಕ್ರವಾರ ದೇಶದ ಆಯಕಟ್ಟಿನ ಕ್ಷಿಪಣಿ ಕಮಾಂಡ್‌ಗೆ ಭೇಟಿ ನೀಡಿದ ಸಂದರ್ಭ ದ.ಕೊರಿಯಾ ರಕ್ಷಣಾ ಸಚಿವ ಸುಹ್ ವೂಕ್, ದ.ಕೊರಿಯಾದ ಮೇಲೆ ಕ್ಷಿಪಣಿ ಹಾರಿಸಲು ಉ. ಕೊರಿಯಾ ಪ್ರಯತ್ನಿಸಿದರೆ ಪ್ರತಿದಾಳಿ ಮಾಡುವ ಸಾಮರ್ಥ್ಯ ನಮ್ಮಲ್ಲಿದೆ. ಕ್ಷಿಪಣಿ ದಾಳಿಯ ಬೆದರಿಕೆಗಳನ್ನು ಮಟ್ಟಹಾಕಲು ಸಿಯೋಲ್ನಲ್ಲಿ ಪೂರ್ವಭಾವಿ ಮಿಲಿಟರಿ ಕಾರ್ಯತಂತ್ರವನ್ನು ದೀರ್ಘಕಾಲದಿಂದ ಕಾಪಾಡಿಕೊಂಡು ಬರಲಾಗುತ್ತಿದೆ. ಆದರೆ ಸಿಯೋಲ್ನ ಹಿರಿಯ ಅಧಿಕಾರಿಯಾಗಿ ಇದನ್ನು ಸಾರ್ವಜನಿಕವಾಗಿ ಮಾತನಾಡುವುದು ಸಮಂಜಸವಲ್ಲ ಎಂದು ಹೇಳಿದರು.
ಭಾನುವಾರ, ಕಿಮ್ ಅವರ ಸಹೋದರಿ ಕಿಮ್ ಯೋ ಜಾಂಗ್, ಸುಹ್ ಹೇಳಿಕೆಗೆ ಪ್ರತ್ಯುತ್ತರ ನೀಡಿರುವುದಲ್ಲದೆ, ಸಿಯೋಲ್ಗೆ ಬೆದರಿಕೆಯನ್ನೂ ಹಾಕಿದ್ದಾರೆ. ಒಬ್ಬ ಪ್ರಜ್ಞಾಹೀನ, ಕಲ್ಮಶ ಮನಸ್ಸಿನ ವ್ಯಕ್ತಿ ಮಾತ್ರ ಪರಮಾಣು ಶಸ್ತ್ರಾಸ್ತ್ರಗಳಿರುವ ದೇಶದ ವಿರುದ್ಧ ಯುದ್ಧ ಸಾರುತ್ತಾನೆ. ದಕ್ಷಿಣ ಕೊರಿಯಾ ತನ್ನ ರಕ್ಷಣಾ ಸಚಿವ ಮಾಡಿದ ಅಜಾಗರೂಕ ಹೇಳಿಕೆಗಳಿಂದಾಗಿ ಗಂಭೀರ ಬೆದರಿಕೆಯನ್ನು ಎದುರಿಸಬಹುದು. ದ.ಕೊರಿಯಾ ನಿಜವಾಗಿಯೂ ವಿಪತ್ತು ತಡೆಯಲು ಬಯಸುವುದಾದರೆ ಸ್ವತಃ ಅವರೇ ಶಿಸ್ತು ಕಾಪಾಡಿಕೊಂಡು ಸುಮ್ಮನಿರುವುದು ಉತ್ತಮ ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.