ಮ್ಯಾನ್ಮಾರ್:ಮ್ಯಾನ್ಮಾರ್ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಅಲ್ಲಿನ ಸೇನೆ ವೈಮಾನಿಕ ಬಾಂಬ್ ದಾಳಿ ನಡೆಸಿದ್ದು, ಭೀಕರ ದುರಂತದಲ್ಲಿ ಮಕ್ಕಳು ಸೇರಿದಂತೆ 100 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಈ ದಾಳಿಗೆ ವಿಶ್ವದೆಲ್ಲೆಡೆಯಿಂದ ಬಲವಾದ ಖಂಡನೆ ವ್ಯಕ್ತವಾಗುತ್ತಿದೆ.
ದೇಶದ 2ನೇ ದೊಡ್ಡ ನಗರವಾದ ಮ್ಯಾಂಡಲೆಯ ಉತ್ತರಕ್ಕಿರುವ 100 ಕಿ.ಮೀ ದೂರದಲ್ಲಿನ ಸಾಗಯಿಂಗ್ ಪ್ರದೇಶದಲ್ಲಿ ಸೇನೆ ವಿರುದ್ಧ ಚಳವಳಿ ತೀವ್ರವಾಗಿ ನಡೆಯುತ್ತಿದೆ. ಇದನ್ನೇ ಗುರಿಯಾಗಿಸಿಕೊಂಡು ಸೇನಾಪಡೆ ಮಂಗಳವಾರ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಮೃತರಲ್ಲಿ ಕೆಲವರು ಹೋರಾಟಗಾರರಾಗಿದ್ದರೆ, ಇನ್ನು ಕೆಲವರು ನಾಗರಿಕರು ಸಹಿತ ಪ್ರಾಣ ಕಳೆದುಕೊಂಡಿದ್ದಾರೆ.
ಹಳ್ಳಿಯಲ್ಲಿ ದೇಶವಿರೋಧಿ ಚಟುವಟಿಕೆ ನಡೆಸಲಾಗುತ್ತಿತ್ತು. ಅಲ್ಲದೇ, ಮಿಲಿಟರಿ ಆಡಳಿತದ ವಿರುದ್ಧ ಕಚೇರಿಯನ್ನು ಆರಂಭಿಸಿ ಮಂಗಳವಾ ಬೆಳಗ್ಗೆ ಉದ್ಘಾಟನೆ ಮಾಡುವ ಯೋಜನೆ ರೂಪಿಸಿದ್ದರು. ಈ ಕಾರಣಕ್ಕಾಗಿ ದಾಳಿ ನಡೆಸಲಾಗಿದೆ ಎಂದು ಸೇನಾಡಳಿತ ವಕ್ತಾರ ಜಾವ್ ಮಿನ್ ಟುನ್ ತಿಳಿಸಿದ್ದಾರೆ.
ದಾಳಿಯಲ್ಲಿ ಮಕ್ಕಳು, ಹೋರಾಟಗಾರರು ಸೇರಿದಂತೆ 100 ಮಂದಿ ಸಾವನ್ನಪ್ಪಿದ್ದಾರೆ. 30 ಮಂದಿ ಗಾಯಗೊಂಡಿದ್ದಾರೆ. ದೇಶವನ್ನು ಸೇನಾಡಳಿತ ತನ್ನ ವಶಕ್ಕೆ ಪಡೆದ ಬಳಿಕ ನಡೆಯುತ್ತಿರುವ ಮಾರಣಾಂತಿಕ ದಾಳಿ ಇದಾಗಿದೆ. ಪ್ರತಿಭಟನಾಕಾರರ ವಿರುದ್ಧ ಪ್ರತಿರೋಧ ಪಡೆಗಳನ್ನು ರಚಿಸಲಾಗಿದ್ದು, ಉತ್ತಮ ಶಸ್ತ್ರಸಜ್ಜಿತ, ವಾಯುದಾಳಿಗಳನ್ನು ನಡೆಸುವ ಕಾರ್ಯತಂತ್ರವನ್ನು ಮಿಲಿಟರಿ ಹೆಚ್ಚಿಸಿದೆ.
ಸಾಗಯಿಂಗ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಸಾವಿನ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಹಳ್ಳಿಯ ಫೋಟೋಗಳಲ್ಲಿ ಹಲವು ಹೆಣಗಳನ್ನು ಕಾಣಬಹುದು. ವಿರೂಪಗೊಂಡ ದೇಹಗಳೂ ಇದರಲ್ಲಿವೆ. ನಾಶವಾದ ಕಟ್ಟಡ, ಸುಟ್ಟುಹೋದ ಮೋಟಾರ್ ಸೈಕಲ್‌ಗಳು ಮತ್ತು ಭಗ್ನಾವಶೇಷಗಳು ಕಾಣಿಸುತ್ತಿವೆ.