ಬ್ಯಾಂಕಾಕ್:ಮಿಲಿಟರಿ ಆಡಳಿತವಿರುವ ಮ್ಯಾನ್ಮಾರ್ ನ್ಯಾಯಾಲಯ ದೇಶದ ಮಾಜಿ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದೆ. ಈ ಸಂಬಂಧ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಸೇನೆ ಸೂಕಿ ಬೆಂಬಲಿತ ಸರ್ಕಾರವನ್ನು ಪದಚ್ಯುತಗೊಳಿಸಿ, ಆಡಳಿತವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು.
ಸೂಕಿ, ಉನ್ನತ ರಾಜಕೀಯ ಸಹೋದ್ಯೋಗಿಯೊಬ್ಬರಿಂದ ಚಿನ್ನ ಮತ್ತು ಲಕ್ಷಾಂತರ ಡಾಲರ್ ಹಣ ಸ್ವೀಕರಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರು. ಈ ಬಗ್ಗೆ ನಡೆದ ವಿಚಾರಣೆ ವೇಳೆ, ತಾವು ಚಿನ್ನ ಹಾಗೂ ಲಕ್ಷಾಂತರ ಡಾಲರ್ ಹಣ ಸ್ವೀಕರಿಸಿಲ್ಲ ಎಂದು ಆರೋಪ ತಳ್ಳಿ ಹಾಕಿದ್ದರು.
ಸೂಕಿ ಬೆಂಬಲಿಗರು ಮತ್ತು ಕಾನೂನು ತಜ್ಞರು, ಮ್ಯಾನ್ಮಾರ್ ನ್ಯಾಯಾಲಯದ ತೀರ್ಪು ಮತ್ತು ಮಿಲಿಟರಿ ಆಡಳಿತದ ಕಾನೂನು ಕ್ರಮವನ್ನು ಅನ್ಯಾಯವೆಂದು ಖಂಡಿಸಿದ್ದಾರೆ. 76 ವರ್ಷದ ಸೂಕಿ ಅವರನ್ನು ರಾಜಕೀಯದಿಂದ ದೂರ ಇರಿಸಲು ಅಲ್ಲಿನ ಮಿಲಿಟರಿ ಆಡಳಿತ ಉದ್ದೇಶಿಸಿದೆ ಎಂದು ಅವರೆಲ್ಲ ಆರೋಪಿಸಿದ್ದಾರೆ. ಇನ್ನು ಇತರ ಪ್ರಕರಣಗಳಲ್ಲಿ ಸೂಕಿಗೆ ಅಲ್ಲಿನ ಮಿಲಿಟರಿ ನ್ಯಾಯಾಲಯ ಈಗಾಗಲೇ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಗಮನಿಸಬಹುದಾಗಿದೆ.
ಮ್ಯಾನ್ಮಾರ್ ಕೋರ್ಟ್ ನೀಡಿರುವ ಈ ತೀರ್ಪಿನ ಬಗ್ಗೆ ಅಲ್ಲಿನ ಕಾನೂನು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಧಾನಿ ನೈಪಿಟಾವ್‌ನಲ್ಲಿ ಸೂ ಕಿ ಅವರ ವಿಚಾರಣೆ ನಡೆಯಿತು. ಅವರ ವಕೀಲರು ಮಾಧ್ಯಮಗಳೊಂದಿಗೆ ಮಾತನಾಡುವುದನ್ನು ಸಹ ನಿರ್ಬಂಧಿಸಲಾಗಿದೆ.
ಇದನ್ನು ಓದಿ:ಕರಾಚಿಯಲ್ಲಿ ಬಾಂಬ್ ಸ್ಫೋಟ: ಭಯೋತ್ಪಾದನೆ ಮೂಲ ಕಾರಣ ತಿಳಿಯುವಂತೆ ಚೀನಾ ಒತ್ತಾಯ