ಬ್ಯಾಂಕಾಕ್(ಮ್ಯಾನ್ಮಾರ್):ಮ್ಯಾನ್ಮಾರ್‌ಸೇನೆ ನಡೆಸಿದವಾಯು ದಾಳಿಯಲ್ಲಿ ಮಕ್ಕಳು ಸೇರಿ 17 ಜನರು ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾರತದ ಗಡಿ ಹೊಂದಿಕೊಂಡಿರುವ ಸಗಾಂಗ್ ಪ್ರದೇಶದ ಖಂಪತ್ ನಗರದ ಕಾನನ್ ಗ್ರಾಮದಲ್ಲಿ ಸೋಮವಾರ ಘಟನೆ ನಡೆದಿದೆ.
ಫೆಬ್ರವರಿ 2021ರಲ್ಲಿ ಸೇನೆಯು ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಕಿತ್ತೆಸೆದಿತ್ತು. ನಂತರ ದೇಶದಲ್ಲಿ ನಿರಂತರ ಹಿಂಸಾಚಾರಗಳು ನಡೆಯುತ್ತಿವೆ. ಸೇನೆ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಸೇನೆ ನಡೆಸಿದ ಇದೇ ರೀತಿಯ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇನ್ನು, ಸುದೀರ್ಘ ಹೋರಾಟದ ನಂತರ ಮ್ಯಾನ್ಮಾರ್‌ನಲ್ಲಿ ಲೋಕ್ತಾನ್ ಅನ್ನು ಸ್ಥಾಪಿಸಲಾಯಿತು. ಆದರೆ 2021ರಲ್ಲಿ ಸೇನಾಪಡೆ ಮತ್ತೊಮ್ಮೆ ದಂಗೆ ನಡೆಸಿತು. ಅಂದಿನಿಂದ ದೇಶದೆಲ್ಲೆಡೆ ಸೇನಾಡಳಿತದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಹೆಚ್ಚಿನ ಸಂಖ್ಯೆಯ ಪ್ರಜಾಪ್ರಭುತ್ವಪರ ನಾಯಕರನ್ನು ಸೇನೆ ಗೃಹಬಂಧನದಲ್ಲಿ ಇರಿಸಿದೆ. ಅಥವಾ ಈ ಪೈಕಿ ಕೆಲವರನ್ನು ಜೈಲಿನಲ್ಲಿ ಬಂಧಿಸಿದೆ. ಪ್ರಜಾಪ್ರಭುತ್ವಪರ ಪ್ರತಿಭಟನೆಗಳ ವಿರುದ್ಧ ಸೇನೆಯ ನಿಲುವು ಕಠಿಣವಾಗಿದೆ ಮತ್ತು ಪ್ರತಿಭಟನಾಕಾರರನ್ನು ಕಟ್ಟುನಿಟ್ಟಾಗಿ ನಿಗ್ರಹಿಸುತ್ತಿದೆ. ವಿಶ್ವಸಂಸ್ಥೆ ಕೂಡ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಬಿತ್ತರಿಸಿವೆ.
ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ದಂಗೆಯ ನಂತರ ಮೂರು ಸಾವಿರಕ್ಕೂ ಹೆಚ್ಚು ನಾಗರಿಕರ ಹತ್ಯೆಯಾಗಿದೆ. ಇವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು. ಕಳೆದ ಏಪ್ರಿಲ್‌ನಲ್ಲಿ ಕೆಲವರು ಶಾಲಾ ಆವರಣದಲ್ಲಿ ಶಾಂತಿಯುತ ಪ್ರತಿಭಟನೆಗೆ ಜಮಾಯಿಸಿದ್ದರು. ಈ ವೇಳೆ ಸೇನೆ ವೇಮಾನಿಕ ದಾಳಿ ನಡೆಸಿದ್ದು, ಹಲವು ಶಾಲಾ ಮಕ್ಕಳು ಸಾವನ್ನಪ್ಪಿದ್ದರು. ಇಂಥ ಘಟನೆಗಳಿಗೆ ಪ್ರತಿಕ್ರಿಯಿಸಿದ್ದ ಸೇನೆ, ಮ್ಯಾನ್ಮಾರ್‌ನ ಸೇನೆಯು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾತ್ರ ಶಿಕ್ಷಿಸುತ್ತದೆ. ದೇಶ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಮಜಾಯಿಷಿ ನೀಡಿತ್ತು.
ಇದನ್ನೂ ಓದಿ:ಗದಗ: ಬ್ಯಾನರ್ ಕಟ್ಟುವಾಗ ದುರಂತ; ವಿದ್ಯುತ್ ತಗುಲಿ ಮೂವರು ಯುವಕರು ಸಾವು