ಇಸ್ಲಾಮಾಬಾದ್ (ಪಾಕಿಸ್ತಾನ):ಸರ್ಕಾರದ ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿ ಲಾಭ ಗಳಿಸಿದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಜೀವಕ್ಕೆ ಕುತ್ತು ಇದೆ ಎಂದು ಅವರ ಪತ್ನಿ ಬುಶ್ರಾ ಬೀಬಿ ಅವರು ಆರೋಪಿಸಿದ್ದಾರೆ. ಜೈಲಿನಲ್ಲಿ ವಿಷಪ್ರಾಷನವಾಗುವ ಸಾಧ್ಯತೆ ಇದೆ. ಹೆಚ್ಚಿನ ಭದ್ರತೆ ನೀಡಿ ಎಂದು ಅವರು ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಪಂಜಾಬ್ ಪ್ರಾಂತ್ಯದ ಅಟ್ಟಾಕ್ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ವಿಷ ಉಣ್ಣಿಸುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಸ್ಥಳಾಂತರಿಸಬೇಕು ಎಂದು ಕೋರಿದ್ದರು. ಅದರಂತೆ ನ್ಯಾಯಾಲಯ ಕೂಡ ವರ್ಗಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.
ನನ್ನ ಪತಿಯನ್ನು ಯಾವುದೇ ಸಕಾರಣವಿಲ್ಲದೆ ಅಟ್ಟಾಕ್ ಜೈಲಿನಲ್ಲಿ ಬಂಧಿಸಲಾಗಿದೆ. ಕಾನೂನಿನ ಪ್ರಕಾರ ನನ್ನ ಪತಿಯನ್ನು ಅಡಿಯಾಲಾ ಜೈಲಿಗೆ ವರ್ಗಾಯಿಸಬೇಕು ಎಂದು ಅವರು ಪಂಜಾಬ್ ಪ್ರಾಂತ್ಯದ ಗೃಹ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು. ಅಲ್ಲದೇ, ಆ ಜೈಲಿನಲ್ಲಿ ಯಾವುದೇ ಉತ್ತಮ ಸೌಲಭ್ಯಗಳನ್ನು ನೀಡಲಾಗಿಲ್ಲ. ಅವರ ರಾಜಕೀಯ ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಂಡು ಜೈಲಿನಲ್ಲಿ ಬಿ-ಕ್ಲಾಸ್ ಸೌಲಭ್ಯಗಳನ್ನು ಒದಗಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದರು.