ಸ್ಯಾನ್ ಫ್ರಾನ್ಸಿಸ್ಕೊ:ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ನ್ಯೂರಾಲಿಂಕ್ ಸಂಸ್ಥೆ, ಮಾನವನ ಮಿದುಳಿಗೆ ಚಿಪ್ ಅಳವಡಿಸುವ ಪರೀಕ್ಷೆಗೆ ಮುಂದಾಗಿದ್ದು, ಈ ಸಂಬಂಧ ಅನುಮತಿಯನ್ನು ಕೋರಿದೆ. ಮಾನವನ ಮಿದುಳಿಗೆ ಚಿಪ್ ಅಳವಡಿಸುವ ಪ್ರಕ್ರಿಯೆಗೆ ತಮ್ಮ ತಂಡ ಮುಂದಾಗಿದ್ದು, ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಕೋರಲಾಗಿದೆ. ಮುಂದಿನ ಆರು ತಿಂಗಳಲ್ಲಿ ಕ್ಲಿನಿಕಲ್ ಟೆಸ್ಟ್ ನಡೆಸಲಾಗುವುದು ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ಮಸ್ಕ್ ಅವರ ನ್ಯೂರಾಲಿಂಕ್ ಕಂಪನಿ ಮಿದುಳನ್ನು ಕಂಪ್ಯೂಟರ್‌ಗಳಿಗೆ ಲಿಂಕ್ ಮಾಡುವ ಕೆಲಸ ನಡೆಸುತ್ತಿದೆ. ಇದರಿಂದ ಮೆದುಳಿನ ಅಸ್ವಸ್ಥತೆಗಳಿಗೆ ಒಳಗಾದವರಿಗೆ ಸಹಾಯ ಮಾಡುವ ಗುರಿ ಇದೆ. ಮಿದುಳಿನ ಗಾಯಗಳು, ಇತರೆ ಮಿದುಳು ಸಂಬಂಧಿ ಕಾಯಿಲೆ ಹೊಂದಿರುವವರು ಕೈ ಬಳಕೆ ಮಾಡದೆಯೇ ಮೊಬೈಲ್, ಕಂಪ್ಯೂಟರ್ ಬಳಸಬಹುದು.
ಮಸ್ಕ್ ಅವರ ಈ ಹೊಸ ಯೋಜನೆ ಕುರಿತು ಮಾತನಾಡಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ನ್ಯೂರೋಟೆಕ್ನಾಲಜಿ ಕೇಂದ್ರದ ಸಹ ನಿರ್ದೇಶಕ ರಾಜೇಶ್ ರಾವ್, ಈ ಕ್ಷೇತ್ರದ ಕುರಿತು ಅಧ್ಯಯನ 1990ರ ದಶಕದಲ್ಲೇ ಆರಂಭವಾಯಿತು. ಆದರೆ, ಇತ್ತೀಚೆಗೆ ನಾವು ಸಾಕಷ್ಟು ಪ್ರಗತಿಯನ್ನು ನೋಡಿದ್ದೇವೆ ಎಂದಿದ್ದಾರೆ.
ಈ ಕುರಿತ ಮಸ್ಕ್ ಅವರ ಪ್ರೆಸೆಂಟೇಷನ್ ಅನ್ನು ಆನ್‌ಲೈನ್‌ನಲ್ಲಿ ವೀಕ್ಷಣೆ ನಡೆಸಿದ ಅವರು, ಮೆದುಳಿಗೆ ಕಂಪ್ಯೂಟರ್ ಚಿಪ್ ಅಳವಡಿಸುವ ವಿಷಯದಲ್ಲಿ ನ್ಯೂರಾಲಿಂಕ್ ಪ್ಯಾಕ್‌ಗಿಂತ ಮುಂದಿದೆ ಎಂದು ಭಾವಿಸುವುದಿಲ್ಲ. ಆದರೆ, ಹಾರ್ಡ್ವೇರ್ ಡಿವೈಸ್ ವಿಷಯದಲ್ಲಿ ಅವರು ಸಾಕಷ್ಟು ಮುಂದಿದ್ದಾರೆ ಎಂದು ತಿಳಿಸಿದ್ದಾರೆ.
ದೊಡ್ಡ ಕಾಯಿನ್ ರೀತಿಯ ಚಿಪ್ ಸಾಧನವನ್ನು ತಲೆಬುರುಡೆಗೆ ಅಳವಡಿಸಲಾಗುವುದು. ಇದರ ಅತ್ಯಂತ ಸೂಕ್ಷ್ಮ ವೈರ್ಗಳು ನೇರವಾಗಿ ಮಿದುಳಿಗೆ ಸಂಪರ್ಕ ಹೊಂದಲಿದೆ. ಈ ಸಾಧನ ದೃಷ್ಟಿಮಾಂದ್ಯ, ಪಾರ್ಶ್ವವಾಯು ಪೀಡಿತರು, ಮರೆವಿನ ರೋಗದಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ. ಮಿದುಳಿನಲ್ಲಿ ಉಂಟಾಗುವ ಸಂದೇಶದ ಅನುಸಾರ ಇದು ಕಾರ್ಯನಿರ್ವಹಿಸುತ್ತದೆ. ಪಾರ್ಶ್ವವಾಯುವಿಗೆ ಒಳಗಾದ ಜನರ ಮಿದುಳಿನಲ್ಲಿ ಉಂಟಾಗುವ ಸಂದೇಶಗಳಿಗೆ ತಕ್ಕಂತೆ ಅವರು ಮೊಬೈಲ್, ಕಂಪ್ಯೂಟರ್ ಆಪರೇಟ್ ಮಾಡಬಹುದಾಗಿದೆ.
2018ರಲ್ಲಿ ಕುತ್ತಿಗೆಯಿಂದ ಕೆಳಗೆ ಪಾರ್ಶ್ವವಾಯುಗೆ ಒಳಗಾದವರನ್ನು ಈ ಸಂಸ್ಥೆ ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ ಪರೀಕ್ಷೆಗೆ ಬ್ರೈನ್ಗೇಟ್ ಒಳಪಡಿಸಿತ್ತು. ಈ ಇಂಟರ್ಫೇಸ್ನಲ್ಲಿ ನರಗಳ ಕ್ರಿಯೆಗಳನ್ನು ಸಣ್ಣ ಸೆನ್ಸಾರ್ ಮೂಲಕ ದಾಖಲು ಮಾಡಿ ಇಮೇಲ್ ಮತ್ತು ಆ್ಯಪ್ ಕಾರ್ಯ ನಿರ್ವಹಣೆಗೆ ಒಳಕೆಗೆ ಮಾಡಲಾಗಿತ್ತು. ನ್ಯೂರೋ ರಿಸ್ಟೊರ್ ಸ್ವಿಸ್ ಸಂಶೋಧಕರು, ಇತ್ತೀಚೆಗೆ ಬೆನ್ನು ಹುರಿ ಮೂಳೆ ಮೂಲಕ ಮುರಿತಗೊಂಡವರಿಗೆ ಎಲೆಕ್ಟ್ರಾನಿಕ್ ಸ್ಟಿಮ್ಯೂಲೇಷನ್ ಮೂಲಕ ನರಗಳ ಕ್ರಿಯಾಶೀಲತೆ ಮಾಡಲಾಗಿತ್ತು. ಈ ಮೂಲಕ ಅವರು ಮತ್ತೆ ನಡೆಯಲು ಸಾಧ್ಯವಾಗಿತ್ತು.
ಇನ್ನು ನ್ಯೂರಾಲಿಂಗ್ ಕಾರ್ಯಾಚರಣೆ ಕುರಿತು ಮಾತನಾಡಿರುವ ಸಂಸ್ಥೆಯ ಸಲಹೆಗಾರ ಡಾ. ಜೆಮಿ ಹೆಂಡರ್ಸನ್, ನ್ಯೂರಲಿಂಕ್ ಸಾಧನ ಇತರ ಸಾಧನಗಳಿಗಿಂತ ಭಿನ್ನವಾಗಿದ್ದು, ಮಿದುಳಿನ ಆಳ ತಲುಪಬಹುದಾಗಿದೆ. ವಿವಿಧ ರೀತಿಯ ವ್ಯವಸ್ಥೆಗಳಿದ್ದು, ಅವು ಹಲವು ರೀತಿಯ ಪ್ರಯೋಜನ ಹೊಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:54 ಲಕ್ಷ ಟ್ವಿಟರ್ ಬಳಕೆದಾರರ ಡೇಟಾ ಕಳವು: ಆನ್‌ಲೈನ್‌ನಲ್ಲಿ ಮಾರಾಟ!