ಇಸ್ಲಾಮಾಬಾದ್ (ಪಾಕಿಸ್ತಾನ):ಬಲೂಚ್ ಯುವಕರ ಹತ್ಯೆ ಖಂಡಿಸಿ ಚಳವಳಿ ನಡೆಸುತ್ತಿರವವರ ಮೇಲೆ ಪಾಕಿಸ್ತಾನ ಪೊಲೀಸರ ದೌರ್ಜನ್ಯ ಮುಂದುವರೆದಿದೆ. ಪ್ರತಿಭಟನಾನಿರತ ಮಹಿಳೆಯರನ್ನು ಪಾಕಿಸ್ತಾನದ ಇಸ್ಲಾಮಾಬಾದ್ ಪೊಲೀಸರು ಬಿಡುಗಡೆ ಮಾಡಿದ್ದು, ಇನ್ನೂ ನೂರಾರು ಜನರನ್ನು ಬಂಧನದಲ್ಲಿರಿಸಲಾಗಿದೆ. ಮಹಿಳೆಯರನ್ನು 26 ಗಂಟೆಗಳ ಕಾಲ ಹಿಂಸಿಸಿ, ಅವಮಾನ ಹಾಗೂ ಕಿರುಕುಳ ನೀಡಿದ ಬಳಿಕ ರಿಲೀಸ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಲೂಚ್ ಹತ್ಯಾಕಾಂಡದ ವಿರುದ್ಧದ ಚಳವಳಿಯ 28ನೇ ದಿನದಂದು 26 ಗಂಟೆಗಳ ಅವಮಾನ, ಕಿರುಕುಳ ಮತ್ತು ಚಿತ್ರಹಿಂಸೆ ಅನುಭವಿಸಿದ ನಂತರ ಇಸ್ಲಾಮಾಬಾದ್ ಪೊಲೀಸರು ಬಂಧಿತ ಮಹಿಳಾ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಿದ್ದಾರೆ ಎಂದು ಬಲೂಚ್ ಯಕ್ಜಾತಿ ಸಮಿತಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಬಲೂಚ್ಗಾಗಿ ಹೋರಾಡುತ್ತಿರುವ ಮಹಿಳೆಯರು ಅನುಭವಿಸಿದ ಸಂಕಷ್ಟ, ಅವರನ್ನು ನಡೆಸಿಕೊಂಡ ಬಗ್ಗೆ ಕಿಡಿಕಾರಿದೆ.
ಮಹಿಳಾ ಕಾರ್ಯಕರ್ತೆಯರನ್ನು ಬಿಡುಗಡೆ ಮಾಡಿದ್ದರೂ ಕೂಡ, ಸುಮಾರು 200ಕ್ಕೂ ಅಧಿಕ ಪುರುಷ ಹೋರಾಟಗಾರರನ್ನು ಇನ್ನೂ ಕೂಡ ಪೊಲೀಸ್ ವಶದಲ್ಲಿದ್ದಾರೆ. ಅಲ್ಲದೆ, 162 ಜನರನ್ನು ಅಡಿಯಾಲಾ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಜೊತೆಗೆ ಸುಮಾರು 50 ಮಂದಿಯನ್ನು ಇಸ್ಲಾಮಾಬಾದ್ನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಹೀಗಾಗಿ, ಬಲೂಚ್ ಯಕ್ಜಾತಿ ಸಮಿತಿಯು ಬಲೂಚ್ ಹತ್ಯಾಕಾಂಡ ಮತ್ತು ಹೆಚ್ಚುವರಿ ನ್ಯಾಯಾಂಗ ಅಪಹರಣಗಳ ವಿರುದ್ಧ ತನ್ನ ಹೋರಾಟ ಮುಂದುವರೆಸುವ ನಿರ್ಣಯ ವ್ಯಕ್ತಪಡಿಸಿದೆ. ಮುಂದಿನ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಘೋಷಣೆ ಮಾಡುವುದಾಗಿ ಸಮಿತಿ ಹೇಳಿದೆ.