ನ್ಯೂಯಾರ್ಕ್ (ಅಮೆರಿಕ):ನ್ಯೂಯಾರ್ಕ್ ಸಿಟಿ ಸ್ಟ್ರೀಟ್‌ನಲ್ಲಿ ಗುರುವಾರ ಸಂಜೆ ಡಬಲ್ ಡೆಕ್ಕರ್ ಪ್ರವಾಸಿ ಬಸ್ ಮತ್ತು ಸಿಟಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ಪರಿಣಾಮ 77 ಜನರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ 27 ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಣ್ಣ ಪುಟ್ಟ ಗಾಯಕ್ಕೆ ತುತ್ತಾದ 50 ಜನರಿಗೆ ಸ್ಥಳದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಗುರುವಾರ ರಾತ್ರಿ ಸುಮಾರು 7:15 ಗಂಟೆಗೆ (ಸ್ಥಳೀಯ ಕಾಲಮಾನ) ಮ್ಯಾನ್‌ಹ್ಯಾಟನ್‌ನ ಪೂರ್ವ 23 ನೇ ಸ್ಟ್ರೀಟ್, ಫಸ್ಟ್ ಅವೆನ್ಯೂ ಸ್ಥಳದಲ್ಲಿ ಎಂಟಿಎ ಎಕ್ಸ್‌ಪ್ರೆಸ್ ಬಸ್‌ನ ಹಿಂಭಾಗಕ್ಕೆ ಪ್ರವಾಸ ಬಂದಿದ್ದವರ ಡಬಲ್ ಡೆಕ್ಕರ್ ಬಸ್ ಡಿಕ್ಕಿ ಹೊಡೆದಿದೆ. ಈ ಬಗ್ಗೆ ನ್ಯೂಯಾರ್ಕ್ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಎಂಟಿಎ ಅಧಿಕಾರಿಯ ಹೇಳಿಕೆಯ ಪ್ರಕಾರ, ಪ್ರವಾಸದ ಬಸ್ ಸಿಗ್ನಲ್ ರೆಡ್ ಸಿಗ್ನಲ್ ಮೀರಿ ಮುಂದೆ ಬಂದಿದ್ದು ಇದರಿಂದ ಸುಮಾರು 20 ಸ್ಥಳೀಯ ಜನ ಪ್ರಯಾಣಿಸುತ್ತಿದ್ದ X27 ಬಸ್‌ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎರಡೂ ಬಸ್‌ನ ಜನರಿಗೆ ಕೇವಲ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.