ಮಾಸ್ಕೋ:ದಾಳಿಗೆ ಪ್ರತಿದಾಳಿ ಎನ್ನುವಂತೆ ರಷ್ಯಾ ಉಕ್ರೇನ್‌ನ ಮೇಲೆ ಕ್ಷಿಪಣಿ ದಾಳಿ ಮಾಡಿ ಕೇವಲ 8 ದಿನದಲ್ಲಿ ಸೇಡು ತೀರಿಸಿಕೊಂಡಿದೆ. ಡಾನ್‌ಬಾಸ್‌ನಲ್ಲಿರುವ ಉಕ್ರೇನ್ ಹಿಡಿತದಲ್ಲಿರುವ ಕ್ರಾಮಾಟೋರ್ಸ್ಕ್ ನಗರಕ್ಕೆ ರಷ್ಯಾ ಕ್ಷಿಪಣಿ ದಾಳಿ ಮಾಡಿದ್ದು, ಉಕ್ರೇನ್‌ನ 600ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಇದು ಉಭಯ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
2023ರ ಜನವರಿ 1ರಂದು, ನಿಖರವಾಗಿ ರಾತ್ರಿ 0:01 ಗಂಟೆ ರಾತ್ರಿ ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ (ಡಿಪಿಆರ್) ನಲ್ಲಿರುವ ಮೇಕೆಯೆವ್ಕಾ ನಗರದಲ್ಲಿ ರಷ್ಯಾದ ಸೈನಿಕರ ತಾತ್ಕಾಲಿಕ ವಸತಿ ಪ್ರದೇಶದ ಮೇಲೆ ಉಕ್ರೇನ್, ಯುಎಸ್-ಸರಬರಾಜಾದ ಹಿಮಾರ್ಸ್ ಮಲ್ಟಿಪಲ್ ರಾಕೆಟ್ ಲಾಂಚರ್‌ನಿಂದ ಆರು ಕ್ಷಿಪಣಿಗಳನ್ನು ಕಟ್ಟಡದ ಮೇಲೆ ಹಾರಿಸಿ ದಾಳಿ ಮಾಡಿತ್ತು. ಇದನ್ನು ಗಮನಿಸಿದ ರಷ್ಯಾದ ವಾಯು ರಕ್ಷಣಾ ಪಡೆಗಳು ಎರಡು ಕ್ಷಿಪಣಿಗಳನ್ನು ತಡೆದಿದ್ದಾರೆ. ಆದರೆ ಉಳಿದ 4 ಕ್ಷಿಪಣಿಗಳು ಹಾನಿಯುಂಟು ಮಾಡಿದ್ದವು. ಇದರ ಪರಿಣಾಮ, ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ 89ಕ್ಕಿಂತ ಹೆಚ್ಚು ರಷ್ಯಾದ ಸೈನಿಕ ಪಡೆಗಳು ಸಾವನ್ನಪ್ಪಿದ್ದವು. ಈ ದಾಳಿಗೆ ಪ್ರತ್ಯುತ್ತರವಾಗಿ ರಷ್ಯಾ, ಉಕ್ರೇನ್ ಮೇಲೆ ದಾಳಿ ಮಾಡಿ 600ಕ್ಕೂ ಅಧಿಕ ಸೈನಿಕರ ಹತ್ಯೆ ಮಾಡಿದೆ.