ಬಫಲೋ (ನ್ಯೂಯಾರ್ಕ್): ಅಮೆರಿಕದಲ್ಲಿ ಕೋವಿಡ್ 19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಮತ್ತೊಂದು ಆತಂಕ ಎದುರಾಗಿದೆ. ದೇಶಾದ್ಯಂತ ಸಂಭವಿಸಿರುವ ಚಳಿಗಾಲದ ಚಂಡಮಾರುತ ಭಾರಿ ಪ್ರಮಾಣದ ಅನಾಹುತ ಸೃಷ್ಟಿಸಿದೆ. ಈವರೆಗೆ ಇದು ಕನಿಷ್ಠ 18 ಮಂದಿಯನ್ನು ಬಲಿ ಪಡೆದಿದೆ.
ಬಾಂಬ್ ಸೈಕ್ಲೋನ್ ಎನ್ನುವ ಚಳಿಗಾಲದ ಚಂಡಮಾರುತವು ಅಮೆರಿಕಕ್ಕೆ ಬಂದು ಅಪ್ಪಳಿಸಿದೆ. ಪರಿಣಾಮ ಭಾರಿ ಸಮಸ್ಯೆ ಉಂಟಾಗಿದ್ದು, ಕ್ರಿಸ್‌ಮಸ್ ಸಂಭ್ರಮದಲ್ಲಿದ್ದ ಜನತೆಗೆ ಚಂಡಮಾರುತ ದೊಡ್ಡ ಪೆಟ್ಟು ನೀಡಿದೆ. ಈಗಾಗಲೇ ಸಾವಿರಾರು ಮನೆಗಳಿಗೆ ಹಾನಿಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಚಂಡಮಾರುತಕ್ಕೆ ನ್ಯೂಯಾರ್ಕ್‌ನ ಬಫಲೋ ಪ್ರಾಂತ್ಯ ನಲುಗಿ ಹೋಗಿದ್ದು, ಕೊರೆಯುವ ಚಳಿಯಲ್ಲಿ ಜನರು ನಡುಗುತ್ತಿದ್ದಾರೆ. ಬಲವಾದ ಗಾಳಿ ಸಹ ಬೀಸುತ್ತಿದೆ. ಮರಗಳು ಧರೆಗುರುಳುತ್ತಿವೆ. ಭಾರಿ ಹಿಮಪಾತದಿಂದಾಗಿ ವೈದ್ಯಕೀಯ ತುರ್ತುಸೇವೆ ನೀಡಲು ಸಾಧ್ಯವಾಗದ ಕಾರಣ ಬಫಲೋ ಪ್ರದೇಶದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ, ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.
ಇದನ್ನೂ ಓದಿ:ಹಿಮ, ಮಂಜಿನಿಂದಾಗಿ ಅಮೆರಿಕದಲ್ಲಿ ಭೀಕರ ಸರಣಿ ಅಪಘಾತ ; ಮೂವರ ಸಾವು, 20 ಮಂದಿಗೆ ಗಾಯ
'ಬಫಲೋ ನಯಾಗರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೋಮವಾರ ಬೆಳಗಿನವರೆಗೆ ಮುಚ್ಚಲಾಗುವುದು. ಇಲ್ಲಿನ ಪ್ರತಿಯೊಂದು ಅಗ್ನಿಶಾಮಕ ಟ್ರಕ್ಗಳು ಹಿಮದಲ್ಲಿ ಸಿಲುಕಿಕೊಂಡಿವೆ. ನಾವು ಎಷ್ಟೇ ತುರ್ತು ವಾಹನಗಳನ್ನು ಹೊಂದಿದ್ದರೂ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಭಾರಿ ಪ್ರಮಾಣದ ಹಿಮಪಾತವಾಗುತ್ತಿದೆ. ಗಾಳಿ ಸಹ ಬೀಸುತ್ತಿದೆ. ಅನೇಕ ಕಡೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯುಂಟಾಗುತ್ತಿದೆ. ಬಫಲೋ ನಿವಾಸಿಗಳು ತಮ್ಮ ಮನೆಗಳಿಂದ ಹೊರಬಂದು ಬೇರೆ ಸ್ಥಳಗಳಿಗೆ ಹೋಗಲಾಗದೇ ಪರದಾಡುವಂತಾಗಿದೆ' ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಪರಿಸ್ಥಿತಿ ವಿವರಿಸಿದರು.