ಬ್ಯಾಂಕಾಕ್: ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿ ಮೋಚಾ ಚಂಡಮಾರುತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮ್ಯಾನ್ಮಾರ್ ದೇಶದಲ್ಲಿ 81 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ನೂರಾರು ಜನ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಸಂಪರ್ಕ ವ್ಯವಸ್ಥೆ ಹದಗೆಟ್ಟಿದೆ. ದೊಡ್ಡ ಪ್ರಮಾಣದ ಪ್ರವಾಹಕ್ಕೆ ಭಾರಿ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾನುವಾರ ಮಧ್ಯಾಹ್ನದ ನಂತರ 209 ಕಿಲೋಮೀಟರ್ (130 ಮೈಲುಗಳು) ವೇಗದ ಗಾಳಿಯೊಂದಿಗೆ ರಾಖೈನ್ ರಾಜ್ಯದ ಸಿಟ್ವೆ ಟೌನ್‌ಶಿಪ್ ಬಳಿ ಮೋಚಾ ಚಂಡಮಾರುತ ಬಂದು ಅಪ್ಪಳಿಸಿದ್ದು, ಭೂಕುಸಿತ ಉಂಟು ಮಾಡಿತ್ತು. ಸೋಮವಾರ ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ದುರ್ಬಲಗೊಂಡಿದ್ದು, ವ್ಯಾಪಕ ಪ್ರವಾಹವುಂಟು ಮಾಡಿತ್ತು. ಭಾರಿ ಗಾಳಿಯ ರಭಸಕ್ಕೆ ಕಟ್ಟಡಗಳ ಮೇಲ್ಛಾವಣಿಗಳು ಕಿತ್ತುಹೋಗಿದ್ದು, ಫೋನ್ ಟವರ್ಗಳು ನೆಲಕ್ಕುರುಳಿವೆ.
10 ಶತಮಾನಗಳ ಹಿಂದೆ ಮ್ಯಾನ್ಮಾರ್‌ನ ರಾಜಧಾನಿಯಾಗಿದ್ದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಬಗಾನ್‌ನ ಕೇಂದ್ರ ನಗರ ಸೇರಿದಂತೆ ಮತ್ತಷ್ಟು ಒಳನಾಡಿನ ಪ್ರದೇಶಗಳು ಹಾನಿಗೊಳಗಾಗಿವೆ. ಭೀಕರ ಚಂಡಮಾರುತಕ್ಕೆ 11,532 ಮನೆಗಳು, 73 ಧಾರ್ಮಿಕ ಕಟ್ಟಡಗಳು, 47 ಮಠಗಳು, 163 ಶಾಲೆಗಳು, 29 ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ಹಾಗೂ 112 ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ. ಹಾಗೂ ನೂರಾರು ಜನರು ನಾಪತ್ತೆಯಾಗಿದ್ದಾರೆ. ಸಂತ್ರಸ್ತರನ್ನು ಶಿಬಿರಗಳಿಗೆ ಸ್ಥಳಾಂತರ ಮಾಡಲಾಗಿದೆ. ರಾಖೈನ್ ರಾಜ್ಯದ ಉತ್ತರದಲ್ಲಿ 17 ಮತ್ತು ಚಿನ್ ರಾಜ್ಯದಲ್ಲಿ ನಾಲ್ಕು ಟೌನ್‌ಶಿಪ್‌ಗಳಿಗೆ ಸರ್ಕಾರವು ವಿಪತ್ತು ಘೋಷಣೆಗಳನ್ನು ಹೊರಡಿಸಿದೆ ಎಂದು ಮ್ಯಾನ್ಮಾರ್ ಸರ್ಕಾರಿ ಟೆಲಿವಿಷನ್ MRTV ಮಂಗಳವಾರ ವರದಿ ಮಾಡಿದೆ.
ಹೆಚ್ಚಿನ ಗಾಳಿಯಿಂದಾಗಿ ದೂರಸಂಪರ್ಕ ಸೌಲಭ್ಯಗಳು ಹಾನಿಗೊಳಗಾದ ಕಾರಣ ಸಾವು-ನೋವುಗಳು ಮತ್ತು ಹಾನಿಯ ಪ್ರಮಾಣವನ್ನು ದೃಢೀಕರಿಸುವುದು ಕಷ್ಟವಾಗುತ್ತಿದೆ. ಚಂಡಮಾರುತದ ಆಗಮನಕ್ಕೂ ಮುನ್ನ ಶಿಬಿರಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳು ಎಚ್ಚರಿಸಿದ್ದರು. ಆದರೆ, ಕೆಲವರು ನಿರ್ಲಕ್ಷ ತೋರಿದ್ದರಿಂದ ಅನಾಹುತ ಎದುರಿಸುವಂತಾಗಿದೆ ಎಂದು ಮಾಧ್ಯಮಗಳು ತಿಳಿಸಿವೆ.