ಮಿಸ್ಸಿಸಿಪಿ (ಅಮೆರಿಕ) : ದಕ್ಷಿಣ ಅಮೆರಿಕ ರಾಜ್ಯವಾದ ಮಿಸ್ಸಿಸಿಪಿಯಲ್ಲಿ ಉಂಟಾದ ವಿನಾಶಕಾರಿ ಸುಂಟರಗಾಳಿಯಲ್ಲಿ ಸತ್ತವರ ಸಂಖ್ಯೆ 26 ಕ್ಕೆ ತಲುಪಿದೆ ಮತ್ತು ನೂರಾರು ಜನ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸುಂಟರಗಾಳಿಯಿಂದ ಅಂಗಡಿಗಳು ಮತ್ತು ಮನೆಗಳು ಅಕ್ಷರಶಃ ತುಂಡಾಗಿ ಧ್ವಂಸಗೊಂಡಿವೆ ಎಂದು ವರದಿಗಳು ತಿಳಿಸಿವೆ. ಶುಕ್ರವಾರ ತಡರಾತ್ರಿ ಅಮೆರಿಕದ ದಕ್ಷಿಣದ ಪ್ರದೇಶದಲ್ಲಿ ಆಕಾಶದಲ್ಲಿ ಮೊದಲಿಗೆ ವಿನಾಶಕಾರಿ ಸುಂಟರಗಾಳಿ ಕಾಣಿಸಿಕೊಂಡಿತ್ತು. ನಂತರ ಅದು ಭೂಮಿಗೆ ಅಪ್ಪಳಿಸಿದಾಗ ಮಿಸ್ಸಿಸಿಪಿ ಮತ್ತು ಅಲಬಾಮಾ ಪ್ರಾಂತ್ಯಗಳಾದ್ಯಂತ ವಿನಾಶ ಸೃಷ್ಟಿಸಿದೆ. ರೋಲಿಂಗ್ ಫೋರ್ಕ್‌ನ ಸಣ್ಣ ನಗರ ಮಿಸ್ಸಿಸಿಪಿಯನ್ನು ಸುಂಟರಗಾಳಿ ಬಹುತೇಕ ಅಳಿಸಿಹಾಕಿದೆ.
ಸುಂಟರಗಾಳಿ ಬಹುತೇಕ ಎಲ್ಲವನ್ನೂ ಚೂರುಚೂರು ಮಾಡಿದೆ. ದಶಕಗಳಿಂದ ಬೆಳೆದು ನಿಂತ ಮರಗಳು, ಬೇರುಗಳು ಮತ್ತು ಎಲ್ಲವನ್ನೂ ಕಿತ್ತು ಮನೆಗಳು ಮತ್ತು ವಾಹನಗಳ ಮೇಲೆ ಬೀಳಿಸಿದೆ. ಅಗ್ನಿಶಾಮಕ ಠಾಣೆಯೇ ಹಾರಿ ಹೋಗಿದೆ. ಮನೆಗಳಲ್ಲಿನ ಕೊಠಡಿಗಳೇ ಮಾಯವಾಗಿವೆ. ಸುಂಟರಗಾಳಿಯಿಂದ ಮೃತರ ಕುಟುಂಬಗಳಿಗೆ ಯುಎಸ್ ಅಧ್ಯಕ್ಷ ಬಿಡೆನ್ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಸಂತ್ರಸ್ತರಿಗೆ ಸರ್ಕಾರ ಸಂಪೂರ್ಣ ಸಹಾಯ ನೀಡುವುದಾಗಿ ಹೇಳಿದ್ದಾರೆ.
ವಿನಾಶಕಾರಿ ಚಂಡಮಾರುತದಿಂದ ನೊಂದವರಿಗೆ ಮತ್ತು ಅವರ ಸಹ ಅಮೆರಿಕನ್ನರಿಗೆ ಸಹಾಯ ಮಾಡುತ್ತಿರುವ ತುರ್ತು ಸಿಬ್ಬಂದಿಗೆ ನಾವು ಸಾಧ್ಯವಾದ ಎಲ್ಲ ಸಹಕಾರ ನೀಡುತ್ತಿದ್ದೇವೆ. ಎಲ್ಲಿಯವರೆಗೆ ಸಹಾಯದ ಅಗತ್ಯವಿದೆಯೋ ಅಲ್ಲಿಯವರೆಗೂ ನಾವು ಸಹಾಯಕ್ಕಾಗಿ ನಿಲ್ಲುತ್ತೇವೆ. ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ. ನೀವು ಚೇತರಿಸಿಕೊಳ್ಳಲು ಅಗತ್ಯವಾದ ಬೆಂಬಲ ನೀಡುತ್ತೇವೆ ಎಂದು ಬಿಡೆನ್ ಹೇಳಿದರು.