ಕರ್ನಾಟಕ

karnataka

ETV Bharat / international

ಮಿಸ್ಸಿಸ್ಸಿಪ್ಪಿಯಲ್ಲಿ ಪ್ರಬಲವಾದ ಸುಂಟರಗಾಳಿ: ಮಹಿಳೆ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ - ಮಿಸ್ಸಿಸ್ಸಿಪ್ಪಿಯಾದ್ಯಂತ ಪ್ರಬಲವಾದ ಸುಂಟರಗಾಳಿ

ಮಿಸ್ಸಿಸ್ಸಿಪ್ಪಿಯಾದ್ಯಂತ ಪ್ರಬಲವಾದ ಸುಂಟರಗಾಳಿ - ಗ್ರಾಮೀಣ ಪಟ್ಟಣವಾದ ಲೂಯಿನ್​ಗೆ ಹೆಚ್ಚು ಹಾನಿ- ಓರ್ವ ಮಹಿಳೆ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ.

Representative image
ಪ್ರಾತಿನಿಧಿಕ ಚಿತ್ರ

By

Published : Jun 20, 2023, 8:00 AM IST

ಲೂಯಿನ್ ( ಅಮೆರಿಕ):ಭಾನುವಾರರಾತ್ರಿಯಿಡೀ ಮಿಸ್ಸಿಸ್ಸಿಪ್ಪಿಯಾದ್ಯಂತ ಪ್ರಬಲವಾದ ಸುಂಟರಗಾಳಿ ಬೀಸಿದೆ. ಘಟನೆಯಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ತಾಪಮಾನ, ಆಲಿಕಲ್ಲು ಮಳೆ ಮತ್ತು ಬಿರುಗಾಳಿಗಳಿಂದ ಉಂಟಾಗಬಹುದಾದ ಹಾನಿಯಿಂದ ರಕ್ಷಿಸಲು ರಾಜ್ಯ ತುರ್ತು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಘಟನೆಯ ಸಾವು ಮತ್ತು ಗಾಯಾಳುಗಳ ಬಗ್ಗೆ ಪೂರ್ವ ಮಿಸಿಸಿಪ್ಪಿಯ ಜಾಸ್ಪರ್ ಕೌಂಟಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಣ್ಣ, ಗ್ರಾಮೀಣ ಪಟ್ಟಣವಾದ ಲೂಯಿನ್ ಹೆಚ್ಚು ಹಾನಿಗೊಳಗಾಗಿದೆ. ಡ್ರೋನ್ ಫೂಟೇಜ್ ಮತ್ತು ಫೋಟೋಗಳು ಭಗ್ನಾವಶೇಷಗಳಿಂದ ಆವೃತವಾದ ಭೂಪ್ರದೇಶ, ನಾಶವಾದ ಮನೆಗಳು ಮತ್ತು ಬಿದ್ದ ಮರಗಳನ್ನು ತೋರಿಸಿದೆ.

ಸೋಮವಾರ ತನ್ನ ಹಾನಿಗೊಳಗಾದ ಮನೆಯ ಮುಂದೆ ನಿಂತು ಲೆಸ್ಟರ್ ಕ್ಯಾಂಪ್ಬೆಲ್ ಎಂಬಾತ ತನ್ನ ಸೋದರ ಸಂಬಂಧಿ 67 ವರ್ಷದ ಜಾರ್ಜ್ ಜೀನ್ ಹೇಯ್ಸ್ ಎಂಬುವವರು ಸಾನ್ನಪ್ಪಿದ ಮಹಿಳೆ ಎಂದು ಮಾಧ್ಯಮಗಳಿಗೆ ಹೇಳಿದರು. ಭಾನುವಾರ ರಾತ್ರಿ ನಾನು ನಿದ್ರಿಸುತ್ತಿದ್ದೆ. ಮಧ್ಯರಾತ್ರಿಯ ಸುಮಾರಿಗೆ ಎಚ್ಚರವಾಯಿತು. ತಕ್ಷಣ ಅಡುಗೆ ಮನೆಗೆ ತೆರಳಿದೆ. ನಂತರ ಸುಂಟರಗಾಳಿ ತುಂಬಾ ವೇಗವಾಗಿ ಅಪ್ಪಳಿಸಿತು ಎಂದು ಕ್ಯಾಂಪ್ಬೆಲ್ ಹೇಳಿದರು.

ನನ್ನ ಸೋದರ ಸಂಬಂಧಿ ಮೃತ ಹೇಯ್ಸ್ ಟ್ರೈಲರ್ ಮನೆಯಲ್ಲಿ ವಾಸಿಸುತ್ತಿದ್ದರು. ಹಣೆ ಮತ್ತು ಕಾಲಿಗೆ ತೀವ್ರ ಗಾಯವಾಗಿತ್ತು. ಆಕೆಯನ್ನು ಆ್ಯಂಬುಲೆನ್ಸ್‌ಗೆ ಸಾಗಿಸುವ ತುರ್ತು ಕೆಲಸಗಾರರನ್ನು ಕಂಡು ನಾನು ಮನೆಯಿಂದ ಹೊರ ಬಂದೆ. ಆಗ ಅವಳಿಗೆ ಪ್ರಜ್ಞೆಯಿತ್ತು ಮತ್ತು ಮಾತನಾಡುತ್ತಿದ್ದಳು. ಆದರೆ, ಆಸ್ಪತ್ರೆಗೆ ತಲುಪುವ ಮೊದಲು ಅವಳು ಸಾವನ್ನಪ್ಪಿದಳು ಎಂದು ಕ್ಯಾಂಪ್ಬೆಲ್ ಹೇಳಿದರು.

20 ಜನರಿಗೆ ಸಣ್ಣಪುಟ್ಟ ಗಾಯ: ಹೇಯ್ಸ್ ಸೇರಿದಂತೆ ಜಾಸ್ಪರ್ ಕೌಂಟಿಯಲ್ಲಿ ಗಾಯಗೊಂಡ ಹೆಚ್ಚಿನ ಜನರನ್ನು 2 ರಿಂದ 3 ಗಂಟೆಯ ನಡುವೆ ಲಾರೆಲ್‌ನಲ್ಲಿರುವ ದಕ್ಷಿಣ ಮಧ್ಯ ಪ್ರಾದೇಶಿಕ ವೈದ್ಯಕೀಯ ಕೇಂದ್ರಕ್ಕೆ ಸಾಗಿಸಲಾಯಿತು ಎಂದು ವಕ್ತಾರರಾದ ಬೆಕಿ ಕಾಲಿನ್ಸ್ ಹೇಳಿದ್ದಾರೆ. ಸುಮಾರು 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದಂತೆ ಬಹುತೇಕರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಾಕ್ಸನ್‌ನಲ್ಲಿರುವ ರಾಷ್ಟ್ರೀಯ ಹವಾಮಾನ ಇಲಾಖೆಯ ಹವಾಮಾನಶಾಸ್ತ್ರಜ್ಞ ಎರಿಕ್ ಕಾರ್ಪೆಂಟರ್ "ಈ ಪ್ರದೇಶದ ಮೂಲಕ ಅಕಾಲಿಕವಾಗಿ ಬಲವಾದ ಸುಂಟರಗಾಳಿ ಬೀಸಿದೆ ಎಂದು ಹೇಳಿದರು. ಸುಂಟರಗಾಳಿ ಸಾಮಾನ್ಯವಾಗಿ ಮಿಸ್ಸಿಸ್ಸಿಪ್ಪಿಯಲ್ಲಿ ವಸಂತಕಾಲದ ಆರಂಭದಿಂದ ಮಧ್ಯದಲ್ಲಿ ಅಪ್ಪಳಿಸುತ್ತವೆ. ನಿರಂತರವಾದ ಗುಡುಗು ಮತ್ತು ಆಲಿಕಲ್ಲುಗಳು ಜತೆಗೆ ಹೆಚ್ಚಿನ ತಾಪಮಾನವು ಅಸಾಮಾನ್ಯ ಪರಿಸ್ಥಿತಿಯಾಗಿದೆ" ಎಂದರು.

ಸೋಮವಾರ ಸುಂಟರಗಾಳಿಯು ರಾಜಧಾನಿ ಜಾಕ್ಸನ್‌ನ ಗಡಿಯಲ್ಲಿರುವ ರಾಂಕಿನ್ ಕೌಂಟಿಯ ಮೇಲೂ ಅಪ್ಪಳಿಸಿತು ಎಂದು ಮಿಸ್ಸಿಸ್ಸಿಪ್ಪಿ ಗವರ್ನರ್ ಟೇಟ್ ರೀವ್ಸ್ ಹೇಳಿದ್ದಾರೆ. ತುರ್ತು ಸಿಬ್ಬಂದಿ ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ ಮತ್ತೊಂದು ಸಂಭವನೀಯ ಸುಂಟರಗಾಳಿಯು ದಕ್ಷಿಣ ಮಿಸ್ಸಿಸ್ಸಿಪ್ಪಿ ಪಟ್ಟಣದ ಮಾಸ್ ಪಾಯಿಂಟ್‌ಗೆ ಅಪ್ಪಳಿಸಿತು. ಅಲ್ಲಿ ಹಾರಿಹೋದ ಛಾವಣಿಗಳು ಮತ್ತು ಧರೆಗುರುಳಿದ ವಿದ್ಯುತ್ ಕಂಬಗಳು ಮತ್ತು ಕುಸಿದು ಬಿದ್ದ ಮನೆಗಳನ್ನು ಕಾಣಬಹುದು.

ಜಾಕ್ಸನ್ ಕೌಂಟಿಯಲ್ಲಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯ ಕಾರಣದಿಂದ ಡೌನ್‌ಟೌನ್ ಮಾಸ್ ಪಾಯಿಂಟ್‌ನಲ್ಲಿ ಎಂಟು ಜನರು ಬ್ಯಾಂಕ್‌ನಲ್ಲಿ ಸಿಲುಕಿಕೊಂಡಿದ್ದರು ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಬಳಿಕ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಸೋಮವಾರದ ಸುದ್ದಿ ಬಿಡುಗಡೆಯಲ್ಲಿ ಮಿಸ್ಸಿಸ್ಸಿಪ್ಪಿ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿಯು ಕೇಂದ್ರ ಮಿಸ್ಸಿಸ್ಸಿಪ್ಪಿಯಲ್ಲಿ 49 ಸಾವಿರಕ್ಕೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ ಎಂದು ಹೇಳಿದೆ. ತೀವ್ರ ಹವಾಮಾನದಿಂದ ಸ್ಥಳಾಂತರಗೊಂಡವರಿಗೆ ರಾಜ್ಯವು ಕಮಾಂಡ್ ಸೆಂಟರ್‌ಗಳು ಮತ್ತು ಆಶ್ರಯತಾಣಗಳನ್ನು ತೆರೆಯುತ್ತಿದೆ ಎಂದು ರೀವ್ಸ್ ಹೇಳಿದರು.

ಇದನ್ನೂ ಓದಿ:ನೇಪಾಳದಲ್ಲಿ ಭೀಕರ ಪ್ರವಾಹ, ಭೂಕುಸಿತ: ಮೃತರ ಸಂಖ್ಯೆ 5ಕ್ಕೆ ಏರಿಕೆ, 28 ಮಂದಿ ನಾಪತ್ತೆ

ABOUT THE AUTHOR

...view details