ಕಠ್ಮಂಡು (ನೇಪಾಳ): ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನೇಪಾಳದ ಪರ್ವತಮಯ ಪ್ರದೇಶ ಮುಸ್ತಾಂಗ್ ಜಿಲ್ಲೆಯಲ್ಲಿ ನಿನ್ನೆ ಪತನಗೊಂಡಿತ್ತು. ಇದೀಗ ವಿಮಾನದ ಅವಶೇಷಗಳಿಂದ 16 ಮೃತದೇಹಗಳನ್ನು ಹೊರತೆಗೆಯಲಾಗಿದೆ ಮತ್ತು ಉಳಿದವರಿಗಾಗಿ ಶೋಧ ಮುಂದುವರೆದಿದೆ ಎಂದು ತಿಳಿದುಬಂದಿದೆ.
ದುರಂತದಲ್ಲಿ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರಬಹುದು. ನಾವು ಪ್ರಾಥಮಿಕ ಕಾರ್ಯಾಚರಣೆ ನಡೆಸಿದ್ದು, ವಿಮಾನದಲ್ಲಿ ಯಾವುದೇ ಬೆಂಕಿ ಕಾಣಿಸಿಕೊಂಡಿಲ್ಲ. ವಿಮಾನ ಸಮೀಪದ ಬಂಡೆಗೆ ಅಪ್ಪಳಿಸಿರುವುದರಿಂದ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆಯಿಲ್ಲ. ಆದರೆ ಅಧಿಕೃತ ಹೇಳಿಕೆ ಬರಬೇಕಿದೆ ಎಂದು ಗೃಹ ಸಚಿವಾಲಯ ವಕ್ತಾರ ಫದೀಂದ್ರ ಮಣಿ ಪೋಖ್ರೆಲ್ ಹೇಳಿದರು.