ಲಾಹೋರ್ (ಪಾಕಿಸ್ತಾನ):ತನ್ನ ಮೇಲೆನಿರಂತರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ತಂದೆಯನ್ನು ಅಪ್ರಾಪ್ತ ಮಗಳು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆಗೈದ ಘಟನೆ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿ ಶನಿವಾರ ನಡೆದಿದೆ. 14 ವರ್ಷದ ಬಾಲಕಿ, ಕಳೆದ ಮೂರು ತಿಂಗಳಿಂದ ತಂದೆ ತನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಪೊಲೀಸರಿಗೆ ವಿವರಿಸಿದ್ದಾಳೆ.
ನಾನು ನರಕ ಅನುಭವಿಸುತ್ತಿದ್ದೆ. ಇದರಿಂದಾಗಿ ಮನನೊಂದು, ರೋಸಿ ಹೋಗಿ ಅತ್ಯಾಚಾರಿ ತಂದೆಯನ್ನು ಕೊಲ್ಲಲು ನಿರ್ಧರಿಸಿದೆ ಎಂದು ಬಾಲಕಿ ಹೇಳಿದ್ದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಸೊಹೈಲ್ ಕಾಜ್ಮಿ ಮಾಹಿತಿ ನೀಡಿದ್ದಾರೆ. ಘಟನೆಯನ್ನು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿದ ನಂತರ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.
ಇತ್ತೀಚೆಗೆ, ಬಾಲಕಿ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೊಬ್ಬನಿಗೆ ಪಾಕಿಸ್ತಾನದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಲಾಹೋರ್‌ನ ಲಿಂಗ ಆಧಾರಿತ ಹಿಂಸಾಚಾರ ನಿಯಂತ್ರಣ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮಿಯಾನ್ ಶಾಹಿದ್ ಜಾವೇದ್ ಅವರ ಮಗಳ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದರು. ಆರೋಪಿ ಎಂ.ರಫೀಕ್ ಎಂಬಾತನಿಗೆ ಮರಣದಂಡನೆ ವಿಧಿಸಲಾಗಿದೆ. (ಪಿಟಿಐ)
ಹಿಂದಿನ ಪ್ರಕರಣಗಳು: ನಾಲ್ವರು ಮಹಿಳೆಯರ ಮೇಲೆ ಗ್ಯಾಂಗ್ ರೇಪ್:ಪಾಣಿಪತ್ ಜಿಲ್ಲೆಯಲ್ಲಿ ನಾಲ್ವರು ದರೋಡೆಕೋರರು ಬಂದೂಕಿನಿಂದ ಬೆದರಿಸಿ ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಸೆಪ್ಟೆಂಬರ್ 21 ರಂದು ನಡೆದಿತ್ತು. ತಡರಾತ್ರಿ ದರೋಡೆಕೋರರು ಮಟ್ಲೌಡಾ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಂಪ್‌ಗೆ ನುಗ್ಗಿ ಅಲ್ಲಿದ್ದ ಎಲ್ಲರನ್ನೂ ಒತ್ತೆಯಾಳಾಗಿರಿಸಿದ್ದರು. ನಂತರ ಶಿಬಿರವನ್ನು ಲೂಟಿ ಮಾಡಿದ್ದರು.
ಶಿಬಿರದ ಜನರನ್ನು ಲೂಟಿಗೈದ ಬಳಿಕ ಅಲ್ಲಿಂದ ಸ್ವಲ್ಪ ದೂರದಲ್ಲಿ ಕಳ್ಳರು ಮೀನು ಸಾಕಣೆ ಕೇಂದ್ರವನ್ನು ಗುರಿಯಾಗಿಸಿಕೊಂಡರು. ಅಲ್ಲಿ ಕೆಲಸ ಮಾಡುತ್ತಿದ್ದ ಗಂಡ-ಹೆಂಡತಿಯನ್ನು ಒತ್ತೆಯಾಳಾಗಿಟ್ಟುಕೊಂಡ ಕಳ್ಳರು, ನಗದು ಹಾಗೂ ಚಿನ್ನಾಭರಣ ದೋಚಿದ್ದರು. ಇದಾದ ಬಳಿಕ ರಾತ್ರಿಯಿಡೀ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮಹಿಳೆಯೊಬ್ಬರು ದರೋಡೆಕೋರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ ಆಕೆಯನ್ನು ಕೊಲೆ ಮಾಡಿದ್ದರು. ಕೊಲೆಯಾದ ಮಹಿಳೆ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿತ್ತು.
ವಿಶೇಷಚೇತನ ಬಾಲಕಿಯ ಮೇಲೆ ಅತ್ಯಾಚಾರ:ಮುಂಬೈನಲ್ಲಿ ಚಲಿಸುವ ಟ್ಯಾಕ್ಸಿಯಲ್ಲಿಯೇ 14 ವರ್ಷದ ವಿಶೇಷಚೇತನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ 18 ರಂದು ಪ್ರಕರಣ ನಡೆದಿತ್ತು. ಆರೋಪಿಗಳಾದ ಸಲ್ಮಾನ್ ಶೇಖ್ (26) ಮತ್ತು ಟ್ಯಾಕ್ಸಿ ಚಾಲಕ ಪ್ರಕಾಶ್ ಪಾಂಡೆ ಎಂಬಿಬ್ಬರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬಂಧಿಸಲಾಗಿದೆ.
ಇದನ್ನೂ ಓದಿ:ಚಲಿಸುತ್ತಿದ್ದ ಟ್ಯಾಕ್ಸಿಯಲ್ಲಿ 14 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ: ಇಬ್ಬರು ದುರುಳರು ಅರೆಸ್ಟ್