ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಅವರ ಭವನದಲ್ಲಿ ರಾಶಿ ರಾಶಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪತ್ತೆಯಾದ ನೋಟುಗಳನ್ನು ಪ್ರತಿಭಟನಾಕಾರರು ಎಣಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಶಪಡಿಸಿಕೊಂಡ ಹಣವನ್ನು ಭದ್ರತಾ ಘಟಕಗಳಿಗೆ ಹಸ್ತಾಂತರಿಸಲಾಗುತ್ತದೆ ಎನ್ನಲಾಗ್ತಿದೆ.
ಇತ್ತೀಚೆಗೆ ದ್ವೀಪ ರಾಷ್ಟ್ರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಗ್ಗೆ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಿದ ನೂರಾರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಶನಿವಾರ ಮಧ್ಯ ಕೊಲಂಬೊದ ಅವರ ನಿವಾಸಕ್ಕೆ ಬ್ಯಾರಿಕೇಡ್‌ಗಳನ್ನು ಮುರಿದು ನುಗ್ಗಿದ್ದಾರೆ. ಪ್ರತಿಭಟನಾಕಾರರ ಮತ್ತೊಂದು ಗುಂಪು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ನುಗ್ಗಿ ಬೆಂಕಿ ಹಚ್ಚಿದೆ.
ಅಧ್ಯಕ್ಷರು ಎಲ್ಲಿದ್ದಾರೆ?:ಈ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಪ್ರತಿಭಟನಾಕಾರರು ನಗರಕ್ಕೆ ನುಗ್ಗಿದಾಗಿನಿಂದ ಹೊರಗಿನ ಅವರ ಏಕೈಕ ಸಂವಹನ ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರೊಂದಿಗೆ ಮಾತ್ರ ಇತ್ತು. ಅಧ್ಯಕ್ಷರು ಬುಧವಾರ ರಾಜೀನಾಮೆ ನೀಡುತ್ತಾರೆ ಎಂದು ಶನಿವಾರ ತಡರಾತ್ರಿ ಘೋಷಿಸಿದ್ದರು.
22 ಮಿಲಿಯನ್ ಜನರಿರುವ ದೇಶವಾದ ಶ್ರೀಲಂಕಾವು ಆರ್ಥಿಕ ಪ್ರಕ್ಷುಬ್ಧತೆಯ ವಾತಾವರಣದಲ್ಲಿದೆ. ಇದು ಏಳು ದಶಕಗಳಲ್ಲೇ ಅತ್ಯಂತ ಕೆಟ್ಟದಾಗಿದೆ. ವಿದೇಶಿ ವಿನಿಮಯದ ತೀವ್ರ ಕೊರತೆಯಿಂದ ತೀವ್ರ ದುರ್ಬಲಗೊಂಡಿದೆ. ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಅಗತ್ಯ ಆಮದುಗಳಿಗೆ ಹಣ ಪಾವತಿಸಲು ಹೆಣಗಾಡುತ್ತಿದೆ.