ಪಾಂಟಿಯಾಕ್ (ಅಮೆರಿಕ): ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಕೊಂದು ಇತರರನ್ನು ಭಯ ಭೀತಗೊಳಿಸಿದ್ದಕ್ಕಾಗಿ ಮಿಚಿಗನ್ ಹದಿಹರೆಯದ ಬಾಲಕನಿಗೆ ನ್ಯಾಯಾಲಯವು ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಕ್ವಾಮೆ ರೋವ್ ನೇತೃತ್ವದ ಪೀಠ ಈ ಆದೇಶ ನೀಡಿದ್ದು, ಶಿಕ್ಷೆ ಕಡಿಮೆ ಮಾಡುವಂತೆ ಸಲ್ಲಿಸಲಾಗಿದ್ದ ವಕೀಲರ ಮನವಿಗಳನ್ನು ತಿರಸ್ಕರಿಸಿದರು. ಜೊತೆಗೆ ಆರೋಪಿ ಎಥಾನ್ ಕ್ರಂಬ್ಲಿ, ಪೆರೋಲ್ ಮೇಲೆ ಹೊರಬರುವ ಅವಕಾಶವನ್ನು ನಿರಾಕರಿಸಲಾಗಿದೆ.
2021 ರಲ್ಲಿ ತನ್ನ ಶಾಲೆಯ ಮೇಲೆ ದಾಳಿ ಮಾಡಿದಾಗ 15 ವರ್ಷದವನಾಗಿದ್ದ ಕ್ರಂಬ್ಲಿ, "ನಾನು ಬೇಕು ಅಂತಲೇ ಈ ಕೃತ್ಯಗಳನ್ನು ಆಯ್ಕೆ ಮಾಡಿಕೊಂಡು ಮಾಡಿದ್ದೇನೆ. ಯಾರು ನನ್ನನ್ನು ತಡೆಯಲು ಸಾಧ್ಯವಾಗಲಿಲ್ಲ. ನಾನು ನಿಜವಾಗಿಯೂ ಕೆಟ್ಟ ವ್ಯಕ್ತಿ, ಇನ್ನೂ ಭಯಾನಕ ಕೆಲಸಗಳನ್ನು ಮಾಡಿದ್ದೇನೆ" ಎಂದು ಹೇಳಿದ್ದ. ಈ ಹೇಳಿಕೆಗಳ ಆಧಾರ ಮೇಲೆ ಹಾಗೂ ಪೋಷಕರು ಮತ್ತು ಗಾಯಗೊಂಡು ಬದುಕುಳಿದವರ ನೋವಿನ ಮನವಿಗಳನ್ನು ಆಲಿಸಿ ಶಿಕ್ಷೆ ಘೋಷಿಸಿದ್ದಾರೆ.
ಪ್ರಥಮ ದರ್ಜೆ ಕೊಲೆ ಮತ್ತು ಭಯೋತ್ಪಾದನೆ ಸೇರಿದಂತೆ 24 ಆರೋಪಗಳಿಗೆ ಕ್ರಂಬ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಅಪ್ರಾಪ್ತ ವಯಸ್ಕರ ಹಿಂಸಾತ್ಮಕ ಕೃತ್ಯಗಳನ್ನು ವಯಸ್ಕರ ಅಪರಾಧಗಳಿಗಿಂತ ವಿಭಿನ್ನವಾಗಿ ನೋಡಬೇಕು ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಮತ್ತು ರಾಜ್ಯದ ಅತ್ಯುನ್ನತ ನ್ಯಾಯಾಲಯವು ಹೇಳಿದೆ. ಮಿಚಿಗನ್‌ನಲ್ಲಿ ಹದಿಹರೆಯದವರಿಗೆ ನೀಡಿರುವ ಜೀವಾವಧಿ ಶಿಕ್ಷೆ ಅಪರೂಪ ಘಟನೆಯಾಗಿದೆ. ಆದರೆ, ಪೆರೋಲ್ ಪದವು ಕ್ರಂಬ್ಲಿಯ ಪ್ರಕರಣಕ್ಕೆ ಸರಿಹೊಂದುತ್ತದೆ ಎಂದು ಓಕ್ಲ್ಯಾಂಡ್ ಕೌಂಟಿ ಪ್ರಾಸಿಕ್ಯೂಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.