ವಿಶ್ವಸಂಸ್ಥೆ:ಹುತಾತ್ಮರಾದ ಶಾಂತಿಪಾಲಕರನ್ನು ಗೌರವಿಸಲು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸ್ಮಾರಕ ಗೋಡೆಯನ್ನು ನಿರ್ಮಿಸುವ ಭಾರತದ ಪ್ರಸ್ತಾವನೆಯು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಅನುಮೋದನೆ ದೊರೆತಿದೆ. ಸುಮಾರು 190 ದೇಶಗಳು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಗುರುವಾರ ಈ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ. ಭಾರತದ ನಿರ್ಣಯವನ್ನು ಬೆಂಬಲಿಸಿದ ದೇಶಗಳಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು. ವಿಶ್ವಸಂಸ್ಥೆ ಬುಧವಾರ ತಡವಾಗಿ ಈ ನಿರ್ಣಯವನ್ನು ಅಂಗೀಕರಿಸಿರುವುದು ಗಮನಾರ್ಹ..
ಹುತಾತ್ಮರಾದ ಶಾಂತಿಪಾಲಕರಿಗಾಗಿ ಹೊಸ ಸ್ಮಾರಕ ಗೋಡೆಯನ್ನು ಸ್ಥಾಪಿಸುವ ನಿರ್ಣಯವನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿರುವುದು ಸಂತೋಷವಾಗಿದೆ. ಸುಮಾರು 190 ದೇಶಗಳು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿವೆ. ಎಲ್ಲರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನಿರ್ಣಯವನ್ನುಅಂಗಿಕರಿಸಿದ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಜೈಶಂಕರ್ ಧನ್ಯವಾದಗಳನ್ನು ವ್ಯಕ್ತಪಡಿಸಿದರು. ದಾಖಲೆಯ 190 ಸದಸ್ಯ ರಾಷ್ಟ್ರಗಳಿಂದ ಪಡೆದ ನಿರ್ಣಯವು ಭಾರತದ ಕೊಡುಗೆಗಳು ಮತ್ತು ಉದ್ದೇಶಗಳ ಮೇಲಿನ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಜೂನ್ 21 ರಂದು ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅಮೆರಿಕ ಪ್ರವಾಸ ಮತ್ತು ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗುವ ಮೊದಲೇ ಈ ಬೆಳವಣಿಗೆ ಕಂಡು ಬಂದಿರುವುದು ವಿಶೇಷ.
ವಿಶ್ವಸಂಸ್ಥೆಯ ರಾಯಭಾರಿಯಾಗಿರುವ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಹಾಲ್‌ನಲ್ಲಿ ಬುಧವಾರ ‘ಹುತಾತ್ಮರಾದ ವಿಶ್ವಸಂಸ್ಥೆಯ ಶಾಂತಿಪಾಲಕರ ಸ್ಮಾರಕ ’ ಎಂಬ ಕರಡು ನಿರ್ಣಯ ಮಂಡಿಸಿದರು ಮತ್ತು ಅದನ್ನು ಒಮ್ಮತದಿಂದ ಅಂಗೀಕರಿಸಲಾಯಿತು.