ರೋಸೋ(ಡೊಮಿನಿಕಾ):ಕೋಟ್ಯಂತರ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಗೆ ನ್ಯಾಯಾಲಯದಲ್ಲಿ ಮತ್ತೆ ರಿಲೀಫ್ ಸಿಕ್ಕಿದೆ. ಅನುಮತಿ ಇಲ್ಲದೇ, ಚೋಕ್ಸಿ ಅವರನ್ನು ಆಂಟಿಗುವಾ ಮತ್ತು ಬಾರ್ಬುಡಾದಿಂದ ಗಡಿಪಾರು ಮಾಡುವಂತಿಲ್ಲ ಎಂದು ಡೊಮಿನಿಕಾ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ತಮ್ಮನ್ನು ದೇಶದಿಂದ ಗಡಿಪಾರು ಮಾಡಬಾರದು. ಎಲ್ಲ ತನಿಖೆಗೂ ತಾವು ಸಿದ್ಧ ಎಂದು ಚೋಕ್ಸಿ ವಕೀಲರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಡೊಮಿನಿಕಾ ಕೋರ್ಟ್, ಈ ಆದೇಶ ನೀಡಿದೆ. ತಮಗೆ ಗಡಿಪಾರು ಶಿಕ್ಷೆ ನೀಡುವುದು ಅಮಾನವೀಯ ಮತ್ತು ಅವಮಾನಕರ ಎಂದು ಕೋರ್ಟ್ನಲ್ಲಿ ಚೋಕ್ಸಿ ವಾದಿಸಿದ್ದಾರೆ. ವ್ಯಾಪಾರಿಯನ್ನು ವಿಚಾರಣೆ ಇಲ್ಲದೇ, ಅನುಮತಿ ರಹಿತವಾಗಿ ದೇಶದಿಂದ ಕಳುಹಿಸುವಂತಿಲ್ಲ. ಮೇಲ್ಮನವಿಗಳು ಸೇರಿದಂತೆ ಲಭ್ಯವಿರುವ ಎಲ್ಲಾ ಕಾನೂನು ಪರಿಹಾರಗಳನ್ನು ಹಕ್ಕುದಾರರಿಗೆ ನೀಡಬೇಕು ಎಂದೂ ಇದೇ ವೇಳೆ ಹೇಳಿದೆ.
ಬಲವಂತದ ಅಪಹರಣ, ದೇಶದಿಂದ ಗಡಿಪಾರು ಮಾಡುವುದರ ವಿರುದ್ಧ ಚೋಕ್ಸಿ ಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಪೊಲೀಸರು ಡೊಮಿನಿಕಾಗೆ ಕರೆದೊಯ್ದಿದ್ದಾರೆ. ದೇಶದಿಂದ ತಮ್ಮನ್ನು ಕಳುಹಿಸಬಾರದು ಎಂದು ಮನವಿ ಮಾಡಿದ್ದಾರೆ. ತ್ವರಿತ ತನಿಖೆ ನಡೆಸಲು ತಮ್ಮ ವಿರುದ್ಧ ಯಾವುದೇ ಗಂಭೀರ ಪ್ರಕರಣಗಳು ಇಲ್ಲ. ಆದರೂ, ತನಿಖೆಯ ಹೆಸರಿನಲ್ಲಿ ತಮ್ಮ ಹಕ್ಕು ಕಸಿಯಲಾಗುತ್ತಿದೆ. ಕಿರಿಕಿರಿ ನೀಡುವ ಮೂಲಕ ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗುತ್ತಿದೆ ಎಂದು ವಾದಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್‌ಬಿ) 13,500 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಭಾರತದ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿಕೊಂಡಿದೆ. ಹೀಗಾಗಿ ಚೋಕ್ಸಿ ಭಾರತಕ್ಕೆ ಮೋಸ್ಟ್ ವಾಂಟೆಡ್ ಆರೋಪಿ ಆಗಿದ್ದಾರೆ. ಕಳೆದ ವರ್ಷ ಡೊಮಿನಿಕಾದಿಂದ ಚೋಕ್ಸಿ ನಾಪತ್ತೆಯಾಗಿದ್ದರು. ಬಳಿಕ ಮೇ 26 ರಂದು ಡೊಮಿನಿಕಾದಲ್ಲಿಯೇ ಅವರನ್ನು ಸೆರೆಹಿಡಿಯಲಾಗಿತ್ತು. ಚೋಕ್ಸಿಯ ವಕೀಲರಿಂದ ಸಲ್ಲಿಕೆಯಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಬಳಿಕ ಡೊಮಿನಿಕನ್ ನ್ಯಾಯಾಲಯವು ಅವರ ಗಡಿಪಾರನ್ನು ತಡೆದಿತ್ತು. ಚೋಕ್ಸಿ 2018 ರಿಂದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನೆಲೆಸಿದ್ದಾರೆ.