ಸ್ಟೇಜ್‌ಕೋಚ್:ಹವಾಮಾನ ವೈಪರೀತ್ಯದ ಮಧ್ಯೆ ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಸಾಗಿಸುತ್ತಿದ್ದ ವೈದ್ಯಕೀಯ ವಿಮಾನ ಪತನಗೊಂಡಿದೆ. ರೋಗಿ ಸೇರಿ ಐವರು ದಾರುಣ ಅಂತ್ಯ ಕಂಡಿದ್ದಾರೆ. ಉತ್ತರ ನೆವಾಡಾದಲ್ಲಿ ಶುಕ್ರವಾರ ರಾತ್ರಿ ದುರಂತ ನಡೆದಿದ್ದು ಘಟನಾ ಸ್ಥಳ ರಾಜಧಾನಿ ರೆನೊದಿಂದ 72 ಕಿಮೀ ದೂರದಲ್ಲಿದೆ.
ಚಿಕ್ಕ ವಿಮಾನದಲ್ಲಿ ರೋಗಿಯನ್ನು ಸಾಗಿಸಲಾಗುತ್ತಿತ್ತು. ಪತನಕ್ಕೀಡಾದ ಕೇರ್ ಫ್ಲೈಟ್ ನೆಲಕ್ಕಪ್ಪಳಿಸಿ ಹೊತ್ತಿ ಉರಿದಿದೆ. ಪೈಲಟ್, ಫ್ಲೈಟ್ ನರ್ಸ್, ಫ್ಲೈಟ್ ಪ್ಯಾರಾಮೆಡಿಕ್, ರೋಗಿ ಮತ್ತು ರೋಗಿಯ ಕುಟುಂಬ ಸದಸ್ಯರು ಜೀವ ಕಳೆದುಕೊಂಡಿದ್ದಾರೆ. ಪರ್ವತ ಪ್ರದೇಶದಲ್ಲಿ ವಿಮಾನ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ನೆವಾಡಾದ ಸ್ಟೇಜ್‌ಕೋಚ್ ಬಳಿ ರಾತ್ರಿ 9:15 ರ ಸುಮಾರಿಗೆ ವಿಮಾನ ಪತನಗೊಂಡ ಬಗ್ಗೆ ಮಾಹಿತಿ ಲಭ್ಯವಾಯಿತು. ಸ್ಥಳಕ್ಕೆ ಧಾವಿಸಿ ಶೋಧ ನಡೆಸಿದ 2 ಗಂಟೆಗಳ ನಂತರ ಅವಶೇಷಗಳನ್ನು ಪತ್ತೆ ಮಾಡಲಾಯಿತು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಪಿಲಾಟಸ್ ಪಿಸಿ-12 ಪತನಗೊಂಡ ವಿಮಾನವಾಗಿದೆ. ಇದು ಕೇರ್ ಫ್ಲೈಟ್ ಸಂಸ್ಥೆಗೆ ಸೇರಿದ್ದಾಗಿದೆ. ಘಟನೆಯ ಬಳಿಕ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ವಿಮಾನದ ದಾಖಲೆಗಳನ್ನು ಸಂಗ್ರಹಿಸಿದೆ. ಇದನ್ನು 2002 ರಲ್ಲಿ ತಯಾರಿಸಲಾಗಿತ್ತು. ಅಂದಿನಿಂದ ತುರ್ತು ವೈದ್ಯಕೀಯ ಸೇವೆಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ತಿಳಿದುಬಂದಿದೆ.
ದುರ್ಘಟನೆ ಸಂಭವಿಸಿದ ಸ್ಟೇಜ್ಕೋಚ್ನ ಲಿಯಾನ್ ಕೌಂಟಿಯ ಭಾಗಗಳನ್ನು ಒಳಗೊಂಡಂತೆ ನೆವಾಡಾದ ಹಲವು ಪ್ರದೇಶಗಳಲ್ಲಿ ಚಂಡಮಾರುತದ ಎಚ್ಚರಿಕೆಯನ್ನು ಅಲ್ಲಿನ ರಾಷ್ಟ್ರೀಯ ಹವಾಮಾನ ಇಲಾಖೆ ನೀಡಿತ್ತು. ಇದರ ನಡುವೆಯೂ ವಿಮಾನ ಹಾರಾಟ ನಡೆಸಿದ್ದು, ಪತನಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಭಾರಿ ಹಿಮ, 105 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಭಾನುವಾರದವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ.