ಪ್ಯಾರಿಸ್ (ಫ್ರಾನ್ಸ್):ಪ್ಯಾರಿಸ್‌ನಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಫ್ರೆಂಚ್ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಾಪೆ ಅವರ ಗುಣಗಾನ ಮಾಡಿದರು. ಗುರುವಾರ ಪ್ಯಾರಿಸ್‌ನ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು "ಫ್ರೆಂಚ್ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಾಪೆ ಭಾರತದಲ್ಲಿನ ಯುವಕರಲ್ಲಿ ಸೂಪರ್‌ಹಿಟ್ ಆಗಿದ್ದಾರೆ. ಬಹುಶಃ ಫ್ರಾನ್ಸ್‌ಗಿಂತ ಭಾರತದಲ್ಲಿ ಹೆಚ್ಚಿನ ಜನರಿಗೆ ಎಂಬಾಪೆ ಪರಿಚಿತರಾಗಿದ್ದಾರೆ" ಎಂದು ಪ್ರಧಾನಿ ಮೋದಿ ಹೇಳಿದರು.
ವಿಶ್ವದೆಲ್ಲೆಡೆ ಅಪಾರ ಅಭಿಮಾನಿಗಳನ್ನು ಹೊಂದಿರುವ ಫುಟ್ಬಾಲ್ ಸ್ಟಾರ್: ಪ್ರಸ್ತುತ ಫುಟ್ಬಾಲ್ ಜಗತ್ತಿನಲ್ಲಿ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಶ್ಷಿಯನೋ ರೊನಲ್ಡೋ ಬಳಿಕ ಕೇಳಿ ಬರುವ ಪ್ರಮುಖ ಹೆಸರು ಕೈಲಿಯನ್ ಎಂಬಾಪೆ. ಹೀಗಾಗಿ ಈ ಫ್ರೆಂಚ್ ಸ್ಟಾರ್ಗೆ ವಿಶ್ವದೆಲ್ಲೆಡೆ ಅಪಾರ ಅಭಿಮಾನಿಗಳಿದ್ದಾರೆ. ಎಂಬಾಪೆ ಭಾರತದಲ್ಲೂ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ಈ ಬಾರಿ ಕತಾರ್ನಲ್ಲಿ ನಡೆದ ಫಿಫಾ ವಿಶ್ವಕಪ್ನಲ್ಲಿ ಫ್ರಾನ್ಸ್ ತಂಡವನ್ನು ಫೈನಲ್ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ಫೈನಲ್ ಪಂದ್ಯದಲ್ಲಿ ದಾಖಲೆಯ ಹ್ಯಾಟ್ರಿಕ್ ಗೋಲು ಬಾರಿಸಿದ್ದರು.
ಅಲ್ಲದೇ ಇದರ ಹಿಂದಿನ ಆವೃತ್ತಿ ಅಂದರೆ 2022ರಲ್ಲಿ ರಷ್ಯಾದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್ನಲ್ಲಿ ಫ್ರಾನ್ಸ್ ಚಾಂಪಿಯನ್ ಆಗುವಲ್ಲಿ ಎಂಬಾಪೆ ಪಾತ್ರ ಹಿರಿದಾಗಿತ್ತು. ಜತೆಗೆ ಕತಾರ್ ವಿಶ್ವಕಪ್ನಲ್ಲಿ ಆಡಿದ 7 ಪಂದ್ಯಗಳಲ್ಲಿ 8 ಗೋಲು ಸಿಡಿಸಿದ್ದ ಎಂಬಾಪೆ ಗೋಲ್ಡನ್ ಬೂಟ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಫ್ರೆಂಚ್ ಲೀಗ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರಾಬಲ್ಯ ಹೆಚ್ಚುತ್ತಿದೆ. ವಿಶ್ವಕಪ್ 2022ರ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಅವರ ವಿಶ್ವಕಪ್ ಹ್ಯಾಟ್ರಿಕ್ ಪ್ರಪಂಚದಾದ್ಯಂತ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು.