ಲಹೈನಾ( ಹವಾಯಿ): ಮಾಯಿ ದ್ವೀಪದಲ್ಲಿ ಸಂಭವಿಸಿದ ವಿನಾಶಕಾರಿ ಕಾಳ್ಗಿಚ್ಚಿನಿಂದ ಅಪಾರ ಸಾವು ನೋವು ಸಂಭವಿಸಿದೆ. ಆ.9 ರಂದು ಅವಘಡ ಸಂಭವಿಸಿದ್ದು, ಮೃತರ ಸಂಖ್ಯೆ 53ಕ್ಕೆ ಏರಿಕೆ ಆಗಿದೆ. ಹವಾಯಿ ಗವರ್ನರ್ ಜೋಶ್ ಗ್ರೀನ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹವಾಯಿ ಅತಿದೊಡ್ಡ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. ಭಾರಿ ಕಾಳ್ಗಿಚ್ಚಿಗೆ ಈವರೆಗೆ 53 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಿಬ್ಬಂದಿ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯಾಚರೆಣೆ ಮುಂದುವರೆಸಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಸಾವಿರಕ್ಕೂ ಅಧಿಕ ಕಟ್ಟಡಗಳು ಹಾನಿಗೀಡಾಗಿವೆ ಎಂದು ಗವರ್ನರ್ ಜೋಶ್ ಗ್ರೀನ್ ಕಳವಳ ವ್ಯಕ್ತಪಡಿಸಿದ್ದಾರೆ
ಲಹೈನಾ ನಗರ ಬಿರುಗಾಳಿಯಂತೆ ಹಬ್ಬುತ್ತಿರುವ ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಹೋಗಿದೆ ಎಂದು ಮಾಯಿ ಮೇಯರ್ ರಿಚರ್ಡ್ ಬಿಸ್ಸೆನ್ ಗುರುವಾರ ಬೆಳಗ್ಗೆ ಮಾಹಿತಿ ನೀಡಿದ್ದರು. ಕಾಳ್ಗಿಚ್ಚಿನ ಅನಾಹುತವನ್ನ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಗ್ರೀನ್ 'ನಿಸ್ಸಂದೇಹವಾಗಿ, ಇದು ಲಹೈನಾ ನಗರ ಬಾಂಬ್ ದಾಳಿಗೆ ತುತ್ತಾಗಿರುವಂತೆ ಭಾಸವಾಗುತ್ತಿದೆ ಎಂದು ಹೇಳಿದರು.
ದೇಣಿಗೆ ನೀಡುವಂತೆ ಮನವಿ: ವಿಪತ್ತು ಲೋಕೋಪಕಾರ ಕೇಂದ್ರದ ಉಪಾಧ್ಯಕ್ಷ ರೆಜಿನ್ ವೆಬ್‌ಸ್ಟರ್ ಈ ಬಗ್ಗೆ ಮಾತನಾಡಿ, ಅಗ್ನಿಶಾಮಕ ದಳ ಕಾಳ್ಗಿಚ್ಚನ್ನ ತಹ ಬದಿಗೆ ತರಲು ಇನ್ನೂ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. ಸಮುದಾಯದ ಜನರು ಹಾಗೂ ಸಂಸ್ಥೆಗಳು ದೇಣಿಗೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ. ಈ ದುರಂತದಲ್ಲಿ ಸಂತ್ರಸ್ತರಾದವರಿಗೆ ಹಣಕಾಸು ನೆರವಿನ ಅಗತ್ಯ ಇದ್ದು, ದಾನಿಗಳು ಉದಾರ ದೇಣಿಗೆ ನೀಡಿ, ಇವರನ್ನೆಲ್ಲ ಕಾಪಾಡಬೇಕಿದ ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.
ಜನರು ಕ್ರೌಡ್‌ಫಂಡಿಂಗ್ ಸೈಟ್ 'GoFundMe' ಮೂಲಕ ದೇಣಿಗೆ ನೀಡಬಹುದು. ಇದು ಪ್ರಕೃತಿ ಅವಘಡದಲ್ಲಿ ಆಸ್ತಿಯನ್ನು ಕಳೆದುಕೊಂಡವರಿಗೆ ಅಥವಾ ಗಾಯಗೊಂಡವರಿಗೆ ಸಹಾಯ ಆಗಲಿದೆ ಎಂದು ಅವರು ಹೇಳಿದ್ದಾರೆ. ಇನ್ನು ಐತಿಹಾಸಿಕ ಪಟ್ಟಣವಾದ ಲಹೈನಾದಲ್ಲಿನ ದೃಶ್ಯಗಳು ಮನಕಲಕುವಂತಿವೆ. ಹವಾಯಿಯ ತುರ್ತು ಪ್ರತಿಕ್ರಿಯೆ ಸಿಬ್ಬಂದಿ ಸಂತ್ರಸ್ತರನ್ನು ರಕ್ಷಿಸಲು ಹರಸಾಹನ ಪಡುತ್ತಿದ್ದಾರೆ. ಗುರುವಾರ ಈ ಪ್ರದೇಶದಲ್ಲಿನ ಒಂದು ರಸ್ತೆಯು ಸುಟ್ಟು ಕರಕಲಾದ ವಾಹನಗಳಿಂದ ತುಂಬಿರುವುದು ಕಂಡು ಬಂದಿತ್ತು.