ನ್ಯೂ ಓರ್ಲಿಯನ್ಸ್( ಅಮೆರಿಕ):ಯುನೈಟೆಡ್ ಸ್ಟೇಟ್ಸ್ನ ನ್ಯೂ ಓರ್ಲಿಯನ್ಸ್ನಲ್ಲಿ ಸೋಮವಾರ ಆವರಿಸಿದ್ದ ಜೌಗು ಪ್ರದೇಶದ ಬೆಂಕಿಯ ಹೊಗೆ ಹಾಗೂ ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೇ ಬೃಹತ್ ಪ್ರಮಾಣದ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ವಾಹನಗಳಿಗೆ ಹೊತ್ತಿಕೊಂಡ ಬೆಂಕಿ ಹಾಗೂ ಹೊಗೆಯಿಂದಾಗಿ ಕನಿಷ್ಠ ಏಳು ಮಂದಿ ಸಾವನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸರಣಿ ಅಪಘಾತದಲ್ಲಿ ಸುಮಾರು 158 ವಾಹನಗಳು ನಜ್ಜುಗುಜ್ಜಾಗಿದ್ದು, ಹಲವು ವಾಹನಗಳು ಸುಟ್ಟುಕರಕಲಾಗಿವೆ. ನ್ಯೂ ಓರ್ಲಿಯನ್ಸ್ನ ವಾಯವ್ಯ 55 ಇಂಟರ್ಸ್ಟೇಟ್ ಹೆದ್ದಾರಿಯಲ್ಲಿ ಬೆಳಗ್ಗೆ 9 ಗಂಟೆ ಹೊತ್ತಿಗೆ ದಟ್ಟ ಮಂಜು ಆವರಿಸಿತ್ತು. ಹೀಗಾಗಿ ವಾಹನ ಚಾಲಕರಿಗೆ ರಸ್ತೆ ಕಾಣದಂತಾಗಿತ್ತು. ಈ ಪರಿಣಾಮ ಸರಣಿ ಅಪಘಾತಗಳು ಸಂಭವಿಸಿವೆ. ಈ ದುರ್ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಲೂಸಿಯಾನ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ನ್ಯೂ ಓರ್ಲಿಯನ್ಸ್ ಪೊಲೀಸರ ಪ್ರಕಾರ, ಉತ್ತರ ಮತ್ತು ದಕ್ಷಿಣ ದಿಕ್ಕಿನ ಮಾರ್ಗಗಳಲ್ಲೂ ವಾಹನಗಳು ಅಪಘಾತಗೊಂಡಿವೆ. ಅವುಗಳಲ್ಲಿ ಕೆಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಎಲ್ಲ ವಾಹನಗಳು ಒಂದರ ಹಿಂದೆ ಒಂದರಂತೆ ಸಿಕ್ಕಿಹಾಕಿಕೊಂಡಿದ್ದು, ಅದರಲ್ಲಿ ವಿಷಕಾರಿ ದ್ರವವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಟ್ರಕ್ ವೊಂದನ್ನು ಅಲ್ಲಿಂದ ಬೇರ್ಪಡಿಸಲಾಗುತ್ತಿದೆ. ಈ ಮೂಲಕ ಆಗುವ ಮತ್ತಷ್ಟು ಅಪಾಯವನ್ನು ತಡೆಯಲಾಗುತ್ತಿದೆ. ಇನ್ನು ಟ್ರಾಫಿಕ್ ಒಳಗೆ ಸಿಲುಕಿಕೊಂಡಿರುವವರನ್ನು ಕಾಪಾಡುವ ಕಾರ್ಯಾಚರಣೆ ನಡೆಯುತ್ತಿದ್ದು, ಸಾವು ನೋವುಗಳು ಹೆಚ್ಚಾಗುವ ಸಾಧ್ಯೆತಯಿದೆ. ತಮ್ಮ ಕುಟುಂಬದ ಸದಸ್ಯರು ಕಾಣೆಯಾಗಿರುವಂತಹವರು ಏಜೆನ್ಸಿಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.