ಕೊಲಂಬೊ (ಶ್ರೀಲಂಕಾ):ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾ ಇಂದು ತನ್ನ ಸಂಸತ್ತಿನ ಹೊರಗೆ ಬೃಹತ್ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಜನರು ಅಧ್ಯಕ್ಷ ಗೋತಬಯ ರಾಜಪಕ್ಸೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ಅಧ್ಯಕ್ಷರು ಮತ್ತು ಪ್ರಧಾನಿ ಅವರ ಮನೆಗೆ ಹೋಗಬೇಕು ಎಂದು ಪ್ರತಿಭಟನಾಕಾರರು ಆಗ್ರಹ ಮಾಡಿದ್ದಾರೆ. ಎಲ್ಲ ಬೆಲೆಗಳು ಏರಿಕೆಯಾಗುತ್ತಿವೆ. ವಿಶೇಷವಾಗಿ ಅಕ್ಕಿ ಬೆಲೆಗಳು ಈ ಅಧ್ಯಕ್ಷರು ಬಂದ ನಂತರ ಶೇಕಡಾ 100 ರಷ್ಟು ಹೆಚ್ಚಾಗಿದೆ. ಒಂದು ಕಿಲೋ ಅಕ್ಕಿ 80 ರೂಪಾಯಿಗಳು. 13-14 ಗಂಟೆಗಳ ಕಾಲ ವಿದ್ಯುತ್ ಕಡಿತವಿದೆ. ಪರೀಕ್ಷೆ ಬರೆಯಲು ಪೇಪರ್ ಕೂಡ ಇಲ್ಲ ಎಂದು ಮಹಿಳಾ ಪ್ರತಿಭಟನಾಕಾರರು ಈ ವೇಳೆ ತಮ್ಮ ನೋವು ತೋಡಿಕೊಂಡಿದ್ದು, ರಾಜಪಕ್ಷ ಅವರು ಅಸಮರ್ಥರಾಗಿರುವ ಕಾರಣ ಅಧಿಕಾರದಿಂದ ಹೊಬರಬೇಕಿದೆ ಎಂದು ಮನವಿ ಮಾಡಿದ್ದಾರೆ.
ದೇಶವು ಸಮಾಜದ ವ್ಯಾಪಕ ವರ್ಗದಿಂದ ಒಂದು ಸುತ್ತಿನ ಪ್ರತಿಭಟನೆಗಳ ಮೂಲಕ ತತ್ತರಿಸುತ್ತಿದೆ ಎಂದೇ ಹೇಳಬಹುದು. ಇನ್ನು ರಾಜಪಕ್ಸೆ ಸರ್ಕಾರವು ಚೀನಾಕ್ಕೆ ಎಲ್ಲವನ್ನೂ ಮಾರಾಟ ಮಾಡುತ್ತಿದೆ ಎಂದು ಶ್ರೀಲಂಕಾದ ಆಹಾರ ಮಾರಾಟಗಾರರು ಆರೋಪಿಸಿದ್ದಾರೆ. ದೇಶದಲ್ಲಿ ಏನೂ ಇಲ್ಲ. ಇತರ ದೇಶಗಳಿಂದ ಸಾಲದ ಮೇಲೆ ಎಲ್ಲವನ್ನೂ ಖರೀದಿಸಿದೆ. ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆ ಶ್ರೀಲಂಕಾದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಬೆಲೆಗಳೂ ಗಗನಕ್ಕೇರುತ್ತಿವೆ ಎಂದು ಕಿಡಿಕಾರಿದ್ದಾರೆ.
3 ರಿಂದ 4 ತಿಂಗಳ ಹಿಂದೆ ಸೇಬು ಕೆಜಿಗೆ 500 ರೂ.ಗೆ ಮಾರಾಟವಾಗುತ್ತಿತ್ತು. ಈಗ ಕೆಜಿಗೆ 1000 ರೂ.ಗೆ ಮಾರಾಟವಾಗುತ್ತಿದೆ ಎಂದು ಹಣ್ಣಿನ ವ್ಯಾಪಾರಿ ಫಾರೂಕ್ ಹೇಳಿದ್ದು, ಜನರ ಬಳಿ ಹಣವಿಲ್ಲ. ಶ್ರೀಲಂಕಾ ಸರ್ಕಾರ ಎಲ್ಲವನ್ನೂ ಚೀನಾಕ್ಕೆ ಮಾರಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ವಕೀಲರಾಗಿ ಸೇವೆ ಸಲ್ಲಿಸಲು ಮುಂದಾದ ಮಂಗಳಮುಖಿ: ಒಡಿಶಾದ ಮೊದಲ ಸಾಧಕಿ ಇವರು!
ಇದರ ನಡುವೆ ಹೋಟೆಲ್ ಅಸೋಸಿಯೇಷನ್‌ನ ಸದಸ್ಯರು ಮತ್ತು ಸಿಬ್ಬಂದಿ ಕೊಲಂಬೊದಲ್ಲಿನ ಪ್ರವಾಸೋದ್ಯಮ ಮಂಡಳಿಯ ಹೊರಗೆ ಭಾರಿ ಸಂಖ್ಯೆಯಲ್ಲಿ ಅದರಲ್ಲೂ ಭಾರಿ ಮಳೆಯಲ್ಲಿಯೇ ಪ್ರತಿಭಟಟನೆ ನಡೆಸಿದ್ದಾರೆ. ಈಸ್ಟರ್ ಬಾಂಬ್ ದಾಳಿಯ ನಂತರ ಪ್ರವಾಸೋದ್ಯಮವು ಕುಸಿದಿತ್ತು. ಈಗ COVID-19 ಬಂದಿತು. ಇಲ್ಲಿರುವ ಈ ಎಲ್ಲ ಪ್ರವಾಸೋದ್ಯಮ ಮಧ್ಯಸ್ಥಗಾರರ ನೋವಿನ ಕರೆಯನ್ನು ಕೇಳಿಸಿಕೊಳ್ಳಲು ಯಾರೂ ಇಲ್ಲ ಎಂದು ಶ್ರೀಲಂಕಾದ ಚೆಫ್ಸ್ ಗಿಲ್ಡ್ ಅಧ್ಯಕ್ಷ ಗೆರಾರ್ಡ್ ಮೆಂಡಿಸ್ ಹೇಳಿದ್ದಾರೆ.