ಅನ್ನಾಪೊಲಿಸ್ (ಅಮೆರಿಕ) : ಮೇರಿಲ್ಯಾಂಡ್‌ನ ಅನ್ನಾಪೊಲಿಸ್‌ನಲ್ಲಿರುವ ಖಾಸಗಿ ನಿವಾಸದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ (Mass shooting) ಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಭಾನುವಾರ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅನ್ನಾಪೊಲಿಸ್ ಯುನೈಟೆಡ್ ಸ್ಟೇಟ್ಸ್ ನ ಕ್ಯಾಪಿಟಲ್ ಹಿಲ್ನಿಂದ 30 ಮೈಲಿ ದೂರದಲ್ಲಿದೆ. ರಾಜ್ಯದ ರಾಜಧಾನಿ ನಗರವಾದ ಪ್ಯಾಡಿಂಗ್‌ಟನ್ ಪ್ಲೇಸ್‌ನ ಥೌಸಂಡ್ ಬ್ಲಾಕ್‌ನಲ್ಲಿ ಗುಂಡಿನ ಚಕಮಕಿ ಹಾಗೂ ಗುಂಡಿನ ದಾಳಿ ನಡೆದಿದೆ. ಶಂಕಿತನನ್ನು ಬಂಧಿಸಲಾಗಿದೆ ಎಂದು ಅನ್ನಾಪೊಲಿಸ್ ಪೊಲೀಸ್ ಮುಖ್ಯಸ್ಥ ಎಡ್ ಜಾಕ್ಸನ್ ಹೇಳಿದ್ದಾರೆ.
ಆರಂಭಿಕ ವರದಿಗಳ ಪ್ರಕಾರ ಕನಿಷ್ಠ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು. ಆದರೆ ನಂತರದ ವರದಿಗಳ ಪ್ರಕಾರ ಮೂವರು ಸಾವನ್ನಪ್ಪಿದ್ದಾರೆ. ಬದುಕುಳಿದವರ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲವಾದರೂ, ಓರ್ವ ವ್ಯಕ್ತಿಯನ್ನು ತುರ್ತು ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಅನ್ನಾಪೊಲಿಸ್ ಪೊಲೀಸರು ಘಟನಾ ಸ್ಥಳದಲ್ಲಿ ಮತ್ತು ಆನ್‌ಲೈನ್ ಮೂಲಕ ತಿಳಿಸಿದ್ದಾರೆ.
ವಾಟರ್‌ಫ್ರಂಟ್ ಪ್ರದೇಶದ ಹತ್ತಿರ ನಗರದ ಮಧ್ಯಭಾಗದ ದಕ್ಷಿಣದಲ್ಲಿ ಗುಂಡಿನ ದಾಳಿ ನಡೆದಿದೆ. ಈ ಪ್ರದೇಶದಲ್ಲಿ ಹಲವಾರು ಪೊಲೀಸ್ ಕಾರುಗಳು ಕಂಡುಬಂದವು. "ಈ ಘಟನೆಯು ಆಕಸ್ಮಾತ್ ಆಗಿ ನಡೆದ ಘಟನೆಯಲ್ಲ. ಆರೋಪಿಯೊಬ್ಬನನ್ನು ಈಗಾಗಲೇ ಬಂಧಿಸಲಾಗಿದೆ ಮತ್ತು ಆತನಿಂದ ಶೂಟಿಂಗ್ಗೆ ಬಳಸಲಾದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಜಾಕ್ಸನ್ ಸುದ್ದಿಗಾರರಿಗೆ ತಿಳಿಸಿದರು.